ಧಾರವಾಡ: ಶಿವಮೊಗ್ಗದಲ್ಲಿ ನಡೆದ ಹಿಂದೂ ಯುವಕರ ಮೇಲೆ ದಾಳಿ ಪ್ರಕರಣ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. ಗೃಹ ಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿಯೇ ಇಂತಹ ಘಟನೆಗಳು ನಡೆದರೆ ಬೇರೆ ಕಡೆ ಏನಾಗಬಹುದು? ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಲಿಂದ ಮೇಲೆ ಹಲ್ಲೆ ನೋಡ್ತಿದ್ರೆ ಮುಸ್ಲಿಂ ಸಮಾಜದವರು ಸೊಕ್ಕಿನಿಂದ ವರ್ತನೆ ಮಾಡುತ್ತಿದ್ದಾರೆ ಎನಿಸುತ್ತಿದೆ. ಅವರಿಗೆ ಭಯ ಇಲ್ಲ. ಸರ್ಕಾರ ಎಲ್ಲಿಯವರೆಗೆ ಅವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದರು.
ಹರ್ಷ ಕೊಲೆ ಪ್ರಕರಣ ಅಷ್ಟೇ ಅಲ್ಲ, ಹರ್ಷನ ಕೊಲೆಗಾರರು ಆನಂದವಾಗಿ ಕಾರಾಗೃಹದಲ್ಲಿ ಇದ್ದಾರೆ. ಇವೆಲ್ಲವೂ ಸರ್ಕಾರದ ದೌರ್ಬಲ್ಯ. ಕೊಲೆ ಆದ ತಕ್ಷಣ ನಾಯಕರು ಬಂದು ಮಾತಾಡಿ ಹೋಗೋದಲ್ಲ. ಪ್ರಕರಣವನ್ನು ಸಂಪೂರ್ಣ ಫಾಲೋ ಮಾಡಬೇಕು. ಈ ರೀತಿ ಮಚ್ಚುಗಳನ್ನು ಝಳಪಿಸುತ್ತಾರೆ ಅಂದರೆ, ಯಾವ ರೀತಿ ಪೊಲೀಸ್ ದೌರ್ಬಲ್ಯ ಇದೆ ಎಂಬುವುದು ಗೊತ್ತಾಗುತ್ತದೆ.
ಮುಸ್ಲಿಂ ಏರಿಯಾಗಳಲ್ಲಿ, ಪ್ರತಿ ಮನೆಗಲ್ಲಿ ಮಚ್ಚು, ತಲವಾರ್ಗಳಿವೆ. ಕಾಲೇಜು ವಿದ್ಯಾರ್ಥಿಗಳ ಕಿಸೆಯಲ್ಲಿ ಚಾಕುಗಳಿವೆಯಾ?, ಅವುಗಳನ್ನು ಯಾಕೆ ಪೊಲೀಸರು ಸೀಜ್ ಮಾಡುತ್ತಿಲ್ಲ?, ಸಂಘ ಪರಿವಾರದ ಭದ್ರಕೋಟೆ ಶಿವಮೊಗ್ಗದಲ್ಲಿಯೇ ಈ ರೀತಿ ಆಗಬೇಕಾದ್ರೆ ಬೇರೆ ಕಡೆ ಎನಾಗಬಹುದು, ಯಾವ ರೀತಿ ಮಾಡಬಹುದು ಎಂದು ಮುತಾಲಿಕ್ ಪ್ರಶ್ನಿಸಿದರು.
ಯೋಗಿ ಮಾದರಿಯಲ್ಲಿ ಗಟ್ಸ್ ತೋರಿಸಿ ಕ್ರಮ ಕೈಗೊಳ್ಳಿ. ಆಗ ಮಾತ್ರ ಸೊಕ್ಕಿದವರನ್ನು ಹದ್ದುಬಸ್ತ್ನಲ್ಲಿ ಇಡಬಹುದು. ನಿಮಗೆ ಸಾಧ್ಯವಾಗದಿದ್ದರೆ ಹೇಳಿ ಹಿಂದೂ ಸಮಾಜ ಅದನ್ನು ನೋಡಿಕೊಳ್ಳುತ್ತದೆ ಎಂದರು.