ಹುಬ್ಬಳ್ಳಿ : ಕೇಂದ್ರ ಸರ್ಕಾರದ ಆದೇಶವನ್ನೇ ನಂಬಿ ಕುಳಿತಿದ್ದ ವ್ಯಕ್ತಿಯೊಬ್ಬರು ಕಳೆದ ಹತ್ತು ವರ್ಷದಿಂದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಕೆಲಸವಿಲ್ಲದೆ ಪರದಾಡುತ್ತಿದ್ದು, ಸದ್ಯ ಉದ್ಯೋಗ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದ ಬೆಂಗೇರಿ ಬಡಾವಣೆಯ ನಿವಾಸಿ ಆಂಜನೇಯ ಪ್ರಸಾದ್, ಹುಬ್ಬಳ್ಳಿ-ಧಾರವಾಡ ಸೌಥ್-ವೆಸ್ಟರ್ನ್ ರೈಲ್ವೆ ಇಲಾಖೆಯಲ್ಲಿ 2002-03 ರಲ್ಲಿ ಒಂದು ವರ್ಷದ ಅಪ್ರೆಂಟಿಸ್ ಕೆಲಸವನ್ನು ಪೂರೈಸಿದ್ದಾರೆ. ಅಲ್ಲದೇ 2003 ರಿಂದ 2010ರ ವರೆಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಆದರೆ, 2010ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಿಂದ ಇವರು ಮಾಡುತ್ತಿದ್ದ ಖಾಸಗಿ ಕೆಲಸಕ್ಕೆ ರಿಸೈನ್ ಮಾಡಿ, ಸರ್ಕಾರಿ ಕೆಲಸ ಸಿಗುತ್ತೆ ಅನ್ನೋ ಆಸೆಯಿಂದ ಕಾಯ್ದು ಕುಳಿತಿದ್ದಾರೆ.
ಆದರೆ ಇಲ್ಲಿಯವರೆಗೆ ಇವರಿಗೆ ಕೆಲಸ ಸಿಗ್ತಿಲ್ಲ. ರೈಲ್ವೆ ಇಲಾಖೆ ಅಧಿಕಾರಿಗಳು, ಸಚಿವರಿಗೆ ಭೇಟಿ ಮಾಡಿ ಹಲವು ಬಾರಿ ಮನವಿ ಮಾಡಿದ್ರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಅಧಿಕಾರಿಗಳ ಕಚೇರಿಗೆ ಅಲೆದು ಅಲೆದು ರೋಸಿ ಹೋಗಿರುವ ಆಂಜನೇಯ, ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಡಿಸೆಂಬರ್ 28 ರಿಂದ ಜನವರಿ 28ರವರೆಗೆ ಒಂದು ತಿಂಗಳ ಕಾಲ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಓದಿ-ಮೋದಿ ಹೆಸರು ಉಲ್ಲೇಖಿಸಿ ವಕೀಲ ಆತ್ಮಹತ್ಯೆ; ರೈತರ ಹೋರಾಟ ತೀವ್ರ
ಹುಬ್ಬಳ್ಳಿ-ಧಾರವಾಡ ಸೌಥ್-ವೆಸ್ಟರ್ನ್ ವಿಭಾಗದಲ್ಲಿ 150 ಕ್ಕೂ ಹೆಚ್ಚು ಡಿಪ್ಲೋಮಾ ಮಾಡಿರುವವರು ಕೆಲಸ ಮಾಡಿಕೊಂಡಿದ್ದರು. ಅವರೆಲ್ಲರಿಗೂ ಕೂಡ ಕೇಂದ್ರ ಸರ್ಕಾರದ 2010ರ ಆದೇಶದಂತೆ ಡಿ-ಗ್ರೂಪ್ ಹುದ್ದೆಯ ನೇಮಕ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಕಳೆದ ಹತ್ತು ವರ್ಷದಿಂದ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ಇವರ ಆಕ್ರೋಶಕ್ಕೆ ಕಾರಣವಾಗಿದೆ.
ಬೇರೆ ಬೇರೆ ವಿಭಾಗದಲ್ಲಿ ಈಗಾಗಲೇ ಅಪ್ರೆಂಟಿಸ್ ಕೆಲಸ ಮಾಡಿಕೊಂಡಿದ್ದವರ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ನಮ್ಮ ವಿಭಾಗದಲ್ಲಿ ಮಾತ್ರ ನಮ್ಮನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಇದೇ ಕೆಲಸವನ್ನು ನಂಬಿಕೊಂಡು ಇಂದು ನಾವು ಬೀದಿಗೆ ಬಂದಿದ್ದೇವೆ. ಸರ್ಕಾರದ ಆದೇಶವನ್ನು ಮೀರಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರೋದು ಸರಿಯಲ್ಲ ಎಂದು ಹುಬ್ಬಳ್ಳಿ-ಧಾರವಾಡ ಸೌಥ್-ವೆಸ್ಟರ್ನ್ ವಿಭಾಗದ ಅಧಿಕಾರಿಗಳ ವಿರುದ್ದ ಉದ್ಯೋಗಕಾಂಕ್ಷಿಗಳು ಅಸಮಾಧಾನ ತೋಡಿಕೊಂಡಿದ್ದಾರೆ.
ಇತ್ತ ಕೇಂದ್ರ ಹೊರಡಿಸಿದ ಆದೇಶವನ್ನು ನಂಬಿ ಇದ್ದ ಕೆಲಸವನ್ನು ಕಳೆದುಕೊಂಡು ಕಂಗಾಲಾಗಿರುವ ಇವರು ಇದೀಗ ಬೇರೆ ಖಾಸಗಿ ಕಂಪನಿಗಳಲ್ಲೂ ಕೆಲಸ ಗಿಟ್ಟಿಸಿಕೊಳ್ಳಲು ವಯಸ್ಸಿನ ಅಂತರ ಅಡ್ಡಿಯಾಗಿದೆ. ಹೀಗಾಗಿ ನನಗೆ ನೌಕರಿ ಕೊಡಿಸಿ ಅಂತಾ ಆಂಜನೇಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಮನವಿ ಮಾಡಿದ್ದಾರೆ. ಜೋಶಿ ಅವರು ದಾಖಲೆಗಳನ್ನು ಪರಿಶೀಲಿಸಿ ರೈಲ್ವೆ ಮಂತ್ರಿಗಳಿಗೆ ತಮ್ಮ ಪತ್ರ ಬರೆದು ಕೆಲಸ ಕೊಡುವಂತೆ ಕೋರಿದ್ದಾರೆ. ಆದರೆ ಅದ್ಯಾವುದಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು ತಮ್ಮ ಮೊದಲಿನ ವರಸೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡ್ತಿಲ್ಲ ಅನ್ನೋ ಹಾಗೆ ಇವರ ಪರಿಸ್ಥಿತಿಯಾಗಿದೆ.