ಧಾರವಾಡ: ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿದ್ದಾರೆ. ಪಿಎಸ್‌ಐ ನೇಮಕಾತಿ ಮಾಡುವುದು ಗೃಹ ಸಚಿವರ ಜವಾಬ್ದಾರಿ. ಆದರೆ ಇಲಾಖೆ ಅವರ ಹತೋಟಿಯಲ್ಲಿ ಇಲ್ಲ ಎಂದು ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ನಾನು ಸಿಎಂ ಇದ್ದಾಗ ಅನೇಕ ಪಿಎಸ್‌ಐ ನೇಮಕಾತಿಗಳು ನಡೆದಿವೆ. ಒಂದೂ ಭ್ರಷ್ಟಾಚಾರ ನಡೆದಿಲ್ಲ. ಆಯಾ ಇಲಾಖೆಯ ಸಚಿವರು ಆಯಾ ಇಲಾಖೆಯ ಜವಾಬ್ದಾರರು. ಇದರಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಅಮಾನತು ಆಗಿಲ್ಲ. ಸಚಿವರು ಯಾರೂ ಅವರ ಪದವಿ ಬಿಟ್ಟು ಕೊಟ್ಟಿಲ್ಲ. ಇವರಲ್ಲಿ ನೈತಿಕ, ಭೌತಿಕ ಜವಾಬ್ದಾರಿ ಎರಡೂ ಇಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ನಾವು ಪಾರದರ್ಶಕ ಆಡಳಿತ ಕೊಡಬೇಕು. ಅದರ ಬಗ್ಗೆ ಜನರಿಗೆ ವಿಶ್ವಾಸ ತುಂಬುವ ಕೆಲಸವನ್ನು ಪಕ್ಷ ಮಾಡಲಿದೆ. ಕಾಂಗ್ರೆಸ್‌ನಲ್ಲಿ ಕೇಂದ್ರ ನಾಯಕರ ಹತೋಟಿ ಇದೆ. ಹೀಗಾಗಿ ನಮ್ಮಲ್ಲಿ ಯಾವುದೂ ನಡೆಯಲ್ಲ. ಆದರೆ ಅವರಲ್ಲಿ ಯಾರ ಹತೋಟಿಯೂ ಇಲ್ಲ. ಅವರು ಮಾಡಿದ್ದೇ ಕಾನೂನು ಆಗಿದೆ ಎಂದರು. ಡಿಕೆಶಿ-ಸಿದ್ದರಾಮಯ್ಯ ನಾಯಕತ್ವದ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಅವರವರ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗಬೇಕು. ಅದರಲ್ಲಿ ಜಗಳ ಇಲ್ಲ ಎಂದರು.
ಇದನ್ನೂ ಓದಿ: ಶೀಘ್ರವೇ ಪಿಎಸ್ಐ ಮರು ಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ