ಹುಬ್ಬಳ್ಳಿ: ಬಜೆಟ್ ಅಧಿವೇಶನ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ಹಾಗೂ ಸಿಎಂ ನಿರ್ಧಾರ ಕೈಗೊಳ್ತಾರೆ. ಸಚಿವರು ಯಾರಾಗಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ನಾನು ಸಚಿವ ಸಂಪುಟ ಸೇರುವ ವಿಚಾರದ ಬಗ್ಗೆ ಪದೇ ಪದೇ ಹೇಳಲ್ಲ. ನನ್ನ ನಿಲುವು ಸ್ಪಷ್ಟವಿದೆ. ನಾನು ಸಂಪುಟ ಸೇರಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಖಡಕ್ಕಾಗಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಅನುಭವದ ಪ್ರಕಾರ ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯಲ್ಲ. ದೇಶದಲ್ಲಿ ಇಬ್ಬರು ಸಿದ್ದು ಇದಾರೆ. ಒಬ್ಬ ಸಿಧು ಪಂಜಾಬಿನಲ್ಲಿ ಕಾಂಗ್ರೆಸ್ ಹಾಳು ಮಾಡಿದ. ನಮ್ಮ ರಾಜ್ಯದಲ್ಲಿರುವ ಸಿದ್ದರಾಮಯ್ಯ ಸಹ ಕಾಂಗ್ರೆಸ್ ಅವನತಿಗೆ ತರುತ್ತಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೇರೆ ಬೇರೆ ಬಣ ಕಟ್ಟಿಕೊಂಡಿದ್ದಾರೆ. ಈಗಾಗಲೇ ಅವರಲ್ಲೇ ಗುಂಪುಗಾರಿಕೆ ಆರಂಭವಾಗಿದೆ ಎಂದು ಕುಟುಕಿದರು.
ದೇಶ ಕಾಂಗ್ರೆಸ್ ಮುಕ್ತವಾಗುತ್ತೆ ಅಂತಾ ಮೋದಿಯವರು ಹೇಳುತ್ತಿದ್ದರು. ಈಗ ಅದೇ ಮಾತಿನಂತೆ ಕಾಂಗ್ರೆಸ್ ಮುಕ್ತವಾಗುತ್ತಿದೆ. ರಾಜ್ಯದಲ್ಲಿ ಹಿಂದಿನ ಎಲ್ಲಾ ಸರ್ಕಾರಗಳು ಬಜೆಟ್ ಹಣವನ್ನು ಬಾಕಿ ಉಳಿಸಿಕೊಂಡಿವೆ. ಸಿದ್ದರಾಮಯ್ಯ ಅವರ ಇಂದಿರಾ ಕ್ಯಾಂಟೀನ್ ಹಣ ಸಾಕಷ್ಟು ಬಾಕಿ ಉಳಿದಿದೆ. ಅದರ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಲಿ ಎಂದರು.
ಮಹಾದಾಯಿ ಯೋಜನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿಲ್ಲ. ಗೋವಾ ಚುನಾವಣೆ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ನೀರು ಕೊಡಲ್ಲ ಅಂತಾ ಹೇಳುತ್ತಾರೆ. ಆದ್ರೆ ರಾಜ್ಯದಲ್ಲಿ ಮಹಾದಾಯಿ ನೀರಿಗಾಗಿ ಪಾದಯಾತ್ರೆ ಮಾಡುತ್ತೇವೆ ಎನ್ನುತ್ತಾರೆ. ಮಹಾದಾಯಿ ವಿಚಾರದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಇವೆ. ಆ ಸಮಸ್ಯೆಗಳು ಬಗೆಹರಿದ ನಂತರ ಕಾಮಗಾರಿ ಆರಂಭವಾಗುತ್ತೆ ಎಂದು ಶೆಟ್ಟರ್ ಹೇಳಿದ್ರು.
ಓದಿ: ಯಾವುದೇ ಮೈತ್ರಿ ಇಲ್ಲ, ಮುಂಬರುವ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತೇವೆ : ಹೆಚ್ ಡಿ ದೇವೇಗೌಡ