ಹುಬ್ಬಳ್ಳಿ: ರಾಜ್ಯದಲ್ಲೀಗ ಜಾತಿಗೊಂದು ನಿಗಮ ಬೇಕು ಎನ್ನುವ ಕೂಗು ಜೋರಾಗಿದ್ದು, ರಾಜ್ಯ ಸರ್ಕಾರವೂ ಸಹ ಹೊಸ-ಹೊಸ ನಿಗಮಗಳ ಸ್ಥಾಪನೆಗೆ ಮುಂದಾಗಿದೆ. ಆದರೆ, ಈಗಿರುವ ನಿಗಮಗಳೇ ಅಭಿವೃದ್ಧಿಯಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ನೆರವು ಸಿಗದೇ ಇರುವ ಆಸ್ತಿಯನ್ನು ಮಾರಾಟ ಮಾಡಿ ಸಾಲ ತುಂಬುವ ಪರಿಸ್ಥಿತಿ ಬಂದಿವೆ.
ಆರ್ಥಿಕ ಸಂಕಷ್ಟ: ಆಸ್ತಿ ಮಾರಲು ಮುಂದಾದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಆರಂಭವಾಗಿ ಹಲವು ದಶಕಗಳೇ ಕಳೆದಿದೆ. ಇದೀಗ ನಿಗಮ ಮಂಡಳಿ 110 ಕೋಟಿ ನಷ್ಟದಲ್ಲಿದ್ದು, ಸಾಲದ ಬಡ್ಡಿಯನ್ನು ಕಟ್ಟಲು ಹಣವಿಲ್ಲದೇ ತನ್ನ ಆಸ್ತಿಗಳನ್ನು ಒಂದೊಂದಾಗಿ ಮಾರಲು ಮುಂದಾಗಿದೆ. ಬೆಂಗಳೂರಿನ ಹಲಸೂರು ಮತ್ತು ಪೀಣ್ಯದಲ್ಲಿರುವ ನೇಕಾರರ ನಿಗಮದ ನಾಲ್ಕು ಎಕರೆ ಆಸ್ತಿಯಿದೆ. ಅದರಲ್ಲೂ ಹಲಸೂರಿನಲ್ಲಿರುವ 16 ಗುಂಟೆ ಜಮೀನನ್ನು 16 ಕೋಟಿಗೆ ಮಾರಾಟ ಮಾಡಲಾಗಿದೆ. ಮಾರಾಟದಿಂದ ಬಂದ ಹಣವನ್ನು ಸಾಲದ ಬಡ್ಡಿಗೆ ಕಟ್ಟಲಾಗುತ್ತಿದೆ. ನೇಕಾರರ ಅಭಿವೃದ್ಧಿಗೆ ಬೇಕಾದ ಆರ್ಥಿಕ ನೆರವಿಗೆ ಸರ್ಕಾರ ಎರಡು ವರ್ಷದಿಂದ ಕೊಕ್ಕೆ ಹಾಕಿದ್ದು, ನೇಕಾರರ ಆಕ್ರೋಶಕ್ಕೆ ಕಾರಣವಾಗಿದೆ.
1970 ರ ದಶಕದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಆರಂಭವಾದಾಗ ರಾಜ್ಯದಲ್ಲಿ 46 ಸಾವಿರ ಕೈಮಗ್ಗಗಳಿದ್ದವು. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇದೀಗ ಕೇವಲ 5,600 ಕೈಮಗ್ಗಗಳು ಉಳಿದಿವೆ. ನೇಕಾರರ ಅಭಿವೃದ್ದಿಗಾಗಿ ರಚನೆ ಮಾಡಲಾದ ನಿಗಮ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದ್ದು, ಹಿಂದೆ ಇದ್ದ ನಿರ್ದೇಶಕರು ಮಾಡಿದ ತಪ್ಪಿನಿಂದಾಗಿ ಇಂದು ಆಸ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ.
1991ರಲ್ಲಿ ಕೇಂದ್ರ ಸರ್ಕಾರದ 20 ಕೋಟಿ, ರಾಜ್ಯ ಸರ್ಕಾರದ 20 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡಲಾಗಿತ್ತು. ಆದರೆ, ಹಿಂದಿನ ನಿರ್ದೇಶಕರು ಅದರ ಮೇಲೆ ಹೆಚ್ಚಿನ ಸಾಲ ಪಡೆದು ಆರ್ಥಿಕ ಸಂಕಷ್ಟ ಹೇರಿದ್ದಾರೆ. ಸದ್ಯ 110 ಕೋಟಿ ಆರ್ಥಿಕ ಸಂಕಷ್ಟದಲ್ಲಿರುವ ನಿಗಮ, ಪ್ರತಿವರ್ಷ 9 ಕೋಟಿ ಬಡ್ಡಿಯನ್ನು ಕಟ್ಟುತ್ತಾ ಬರುತ್ತಿದೆ. ಅದರಲ್ಲೂ ಪ್ರತಿವರ್ಷ ಸರ್ಕಾರದಿಂದ ಬರುತ್ತಿದ್ದ 30 ಕೋಟಿ ಅನುದಾನವೂ ನಿಗಮಕ್ಕೆ ಬರುತ್ತಿಲ್ಲ. ಹೀಗಾಗಿ ಕೈ ಮಗ್ಗಗಳನ್ನೆ ನಂಬಿಕೊಂಡಿರುವ ನೇಕಾರರಿಗೆ ಸಂಕಷ್ಟ ಎದುರಾಗಿದೆ. ನೇಕಾರರಿಗೆ ಪ್ರತಿನಿತ್ಯ 120 ರಿಂದ 150 ರೂಪಾಯಿ ಕೂಲಿ ನೀಡಲಾಗುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿ ಬೇರೆ ಬೇರೆ ವೃತ್ತಿಯ ಕಡೆ ಮುಖ ಮಾಡುತ್ತಿದ್ದಾರೆ.