ಧಾರವಾಡ: ಕಂದಾಯ, ಕೃಷಿ, ಪಶುಸಂಗೋಪನೆ, ಪಂಚಾಯತ್ ರಾಜ್, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳು, ಎನ್ಡಿಆರ್ಎಫ್ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ, ಅತಿವೃಷ್ಟಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲೆಯ ಅತಿವೃಷ್ಟಿ ಪರಿಹಾರ ಕಾರ್ಯಗಳ ನಿರ್ವಹಣೆ ಕುರಿತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ತುರ್ತು ಸಭೆ ಜರುಗಿಸಿ, ಮಾತನಾಡಿದರು.
ಕಳೆದ ಸಾಲಿನಲ್ಲಿ ಅತಿ ಹೆಚ್ಚು ಮಳೆಯಾಗಿ ಜನ, ಜಾನುವಾರು, ಮನೆ, ಬೆಳೆ ಸೇರಿದಂತೆ ಸರ್ಕಾರಿ ಕಟ್ಟಡಗಳ ಮೂಲಸೌಕರ್ಯಗಳು ಹಾನಿಯಾಗಿದ್ದವು. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಮಳೆ ಬರುವ ಸಾಧ್ಯತೆ ಇದೆ. ಎಲ್ಲಾ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಪರಿಹಾರ ಕಾರ್ಯಗಳನ್ನು ತಕ್ಷಣ ಕೈಗೊಳ್ಳಲು ಸಿದ್ಧರಾಗಿರಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಬೆಣ್ಣೆಹಳ್ಳ, ತುಪ್ಪರಿಹಳ್ಳ, ದೊಡ್ಡಹಳ್ಳ, ಹುಲಿಕೇರಿ, ಮುಗದಕೆರೆ, ಉಣಕಲ್ಲ ಕೆರೆ, ಕೆಲಗೇರಿ ಕೆರೆ ಸೇರಿದಂತೆ ವಿವಿಧ ಜಲಮೂಲಗಳ ಹತ್ತಿರವಿರುವ ಸುಮಾರು 83 ಗ್ರಾಮ ಹಾಗೂ 43 ಸ್ಥಳಗಳಲ್ಲಿ ಅತಿಯಾದ ಮಳೆಯಾದರೆ ತೊಂದರೆ ಆಗುವ ಸಾಧ್ಯತೆ ಇದೆ.
ಈಗಾಗಲೇ ಎರಡು ದಿನಗಳ ನಿರಂತರ ಮಳೆಯಿಂದಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 37 ಮನೆಗಳು ಭಾಗಶಃ ಹಾನಿಯಾಗಿದ್ದು, ನವಲಗುಂದ ತಾಲೂಕಿನ ಅನೇಕ ಕಡೆ ಬೆಳೆ ಹಾನಿಯಾಗಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಸಮೀಕ್ಷೆ ಮಾಡಿ ಹಾನಿಯ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅತಿ ಮಳೆಯಿಂದ ಹಾನಿಗೆ ಒಳಗಾಗಬಹುದಾದ 83 ಹಳ್ಳಿಗಳಲ್ಲಿ ಗ್ರಾಮಸ್ಥರೊಂದಿಗೆ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಸಭೆ ಜರುಗಿಸಿ ಚಿಕಿತ್ಸೆ ಸೇರಿದಂತೆ ಜಿಲ್ಲಾಡಳಿತ ಸಿದ್ಧಗೊಳಿಸಿರುವ ಸೌಲಭ್ಯ ಕುರಿತು ಮಾಹಿತಿ ನೀಡಬೇಕು. ಪ್ರತಿ ಗ್ರಾಮದಲ್ಲಿ ಈಜು, ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮತ್ತು ಉತ್ತಮ ರೀತಿಯಲ್ಲಿ ಸ್ಪಂದಿಸುವ 10 ಜನ ಯುವ ಸ್ವಯಂ ಸೇವಕರ ತಂಡ ರಚಿಸಬೇಕು ಎಂದರು.
ಅಧಿಕಾರಿಗಳು ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿದ್ದಾಗ ಅವರೊಂದಿಗೆ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಆಯಾ ತಾಲೂಕಿನ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ತಂಡಗಳ ಮೇಲುಸ್ತುವಾರಿ ಮಾಡಬೇಕೆಂದು ಸೂಚಿಸಿದರು.
ಪ್ರತಿ ತಾಲೂಕಿಗೆ ಜಿಲ್ಲಾ ಮಟ್ಟದ ಓರ್ವ ಅಧಿಕಾರಿಯನ್ನು ಅತಿವೃಷ್ಟಿ ಕಾರ್ಯಗಳ ಸಮರ್ಪಕ ಅನುಷ್ಠಾನಕ್ಕಾಗಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಅಗತ್ಯವಿದ್ದಲ್ಲಿ ಪರಿಹಾರ ಕೇಂದ್ರ ಆರಂಭಿಸಲು ಕಟ್ಟಡಗಳನ್ನು ಗುರುತಿಸಿ ಅಲ್ಲಿ ಕುಡಿಯುವ ನೀರು, ಶೌಚಾಲಯ, ಊಟ, ವಸತಿ ಸಮರ್ಪಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯ 83 ಗ್ರಾಮಗಳು ಪ್ರವಾಹಕ್ಕೆ ಒಳಗಾಗಬಹುದು ಎಂದು ಹಿಂದಿನ ವರ್ಷಗಳ ಅನುಭವಗಳ ಆಧಾರದಲ್ಲಿ ಅಂದಾಜಿಸಲಾಗಿದೆ. ಎಲ್ಲಾ ಹಳ್ಳಿಗಳಲ್ಲಿ ಡಂಗೂರ ಸಾರಿ ಜನರನ್ನು ಎಚ್ಚರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಓ ಡಾ.ಬಿ.ಸಿ. ಸತೀಶ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.