ಧಾರವಾಡ: ಕಂದಾಯ ಇಲಾಖೆ ವತಿಯಿಂದ ಪ್ರತಿ ತಿಂಗಳ ಮೂರನೇ ಶನಿವಾರದಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ಗಳು ಮತ್ತು ಇತರೆ ಅಧಿಕಾರಿಗಳು 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ' ಕಾರ್ಯಕ್ರಮದಡಿ ಗ್ರಾಮ ವಾಸ್ತವ್ಯ ಪ್ರಾರಂಭಿಸಲಾಗಿತ್ತು.
ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆಯು ರಾಜ್ಯದಲ್ಲಿ ಹೆಚ್ಚಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಒಂದೆಡೆ ಗುಂಪು-ಗುಂಪಾಗಿ ಸೇರಿದಲ್ಲಿ ಕೋವಿಡ್ ಹೆಚ್ಚಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ, ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಮತ್ತು ಕೊರೊನಾ ತಡೆಗಟ್ಟುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಪ್ರಿಲ್ ತಿಂಗಳ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ' ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆದೇಶ ಹೊರಡಿಸಿದ್ದಾರೆ.
ಕಂದಾಯ ಸಚಿವರ ಸೂಚನೆ ಮೇರೆಗೆ ಏಪ್ರಿಲ್ 17ರಂದು ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮ ವಾಸ್ತವ್ಯ ಹಾಗೂ ಕನಕೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ ಹಾಗೂ ವನಹಳ್ಳಿ ಗ್ರಾಮಗಳಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಪಿಂಚಣಿ, ಕಂದಾಯ ಅದಾಲತ್ ಹಾಗೂ ಪೌತಿ ಖಾತಾ ಆಂದೋಲನವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಪಚುನಾವಣೆ ಮತದಾನದ ಬಳಿಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದೆ ಕಾಂಗ್ರೆಸ್!