ಧಾರವಾಡ: ರಂಗ ಕಲಾವಿದರು, ಪ್ರಸಿದ್ಧ ತಾರೆಯರು, ಗಣ್ಯರು, ಸಾಧಕರು, ನಿಧನ ಹೊಂದಿದರೇ ಕಂಬನಿ ಮಿಡಿಯುತ್ತಿದ್ದ ಪೇಡಾನಗರಿ ಜನ ಇದೀಗ ಅನಾಥ ಮಾನಸಿಕ ಅಸ್ವಸ್ಥೆಯೊಬ್ಬರ ನಿಧನಕ್ಕೆ ಮರುಗಿದ್ದಾರೆ.
'ಧಾರವಾಡ ಹೇಮಾ ಮಾಲಿನಿ' ಅಂತ ಫೇಮಸ್ ಆಗಿದ್ದ ವೃದ್ಧೆ ಬುಧವಾರ ಮಧ್ಯರಾತ್ರಿ ವಯೋಸಹಜ ಕಾಯಿಲೆಯಿಂದ ಕೊಪ್ಪಳದ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಗೋಲ್ಡ್ ಮೆಡಲಿಸ್ಟ್ ಪದವೀಧರೆ ಆಗಿದ್ದ ವಿದ್ಯಾವಂತ ಇಂದುಬಾಯಿ ಇಡೀ ಧಾರವಾಡದ ತುಂಬಾ ಹೇಮಾ ಮಾಲಿನಿ ಅಂತಲೇ ಪ್ರಸಿದ್ಧಿ ಪಡೆದಿದ್ದರು.
ಕನ್ನಡ, ಇಂಗ್ಲಿಷ್ ಹಿಂದಿ, ಮರಾಠಿ ಭಾಷಾ ಪ್ರಾವೀಣ್ಯತೆ ಹೊಂದಿದ್ದ ಹಿರಿಜೀವ, ತಲೆ ಕೆಳಗಾಗಿ ಇಂಗ್ಲಿಷ್ ಪತ್ರಿಕೆ ಓದುವುದರಲ್ಲಿಯೂ ಕೂಡಾ ಪ್ರಸಿದ್ಧಿ ಪಡೆದಿದ್ದರು. ಅಲ್ಲದೆ ಸ್ನಾತಕೋತ್ತರ ಪದವೀಧರೆಯೂ ಆಗಿದ್ದ ಇಂದುಮತಿ ವಾಜಪೇಯಿ ಅಲಿಯಾಸ್ ಧಾರವಾಡದ ಹೇಮಾ ಮಾಲಿನಿ, ಕಳೆದ 30 ವರ್ಷಗಳಿಂದ ಬೀದಿ ಬೀದಿಯಲ್ಲಿ ಹಾಡುಗಳನ್ನ ಹಾಡುತ್ತ ಓಡಾಡಿಕೊಂಡಿದ್ದರು. ಅಪಾರ ಸಿನಿಮಾ ಒಲವು ಇದ್ದ ಕಾರಣಕ್ಕೆ ಹೇಮಾ ಮಾಲಿನಿ ಎಂದು ಧಾರವಾಡದ ಜನ ಕರೆಯುತ್ತಿದ್ದರು.
ಸದ್ಯ ವಿವಿಧ ಪ್ರತಿಷ್ಠಿತ ವ್ಯಕ್ತಿಗಳು, ಕಲಾವಿದರು, ಜನ ಸಾಮಾನ್ಯರು ಹೇಮಾ ಮಾಲಿನಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.