ಧಾರವಾಡ : ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ ಹೇಳಿಕೆಯನ್ನು ಶಾಸಕ ಅರವಿಂದ ಬೆಲ್ಲದ್ ಸಮರ್ಥಿಸಿಕೊಂಡಿದ್ದಾರೆ.
ಧಾರವಾಡದಲ್ಲಿ ಈ ಕುರಿತು ಮಾತನಾಡಿದ ಅವರು, ಈಗ ಇಂದಿರಾ ಕ್ಯಾಂಟೀನ್ ಅಂತಾ ಇದೆ. ದೆಹಲಿಗೆ ಹೋದರೆ ಅವೇ ಹೆಸರುಗಳಿವೆ. ಸರ್ಕಾರದ ಹಣದಿಂದ ಯೋಜನೆಗಳನ್ನು ಮಾಡುತ್ತೇವೆ. ಆದರೆ, ದೆಹಲಿಯಲ್ಲಿ ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ ಹೆಸರುಗಳೇ ಇವೆ ಎಂದರು.
ದೇಶದ ತುಂಬಾ ಬಹುತೇಕ ಯೋಜನೆಗಳು ಅವರ ಹೆಸರಿನಲ್ಲಿವೆ. ಸಹಜವಾಗಿಯೇ ಅದರ ಬಗ್ಗೆ ಸಿ ಟಿ ರವಿ ಗಮನ ಸೆಳೆದಿದ್ದಾರೆ. ಹಿಂದೆ ಮಾಯಾವತಿ ಪಾರ್ಕ್‌ನಲ್ಲಿ ಪ್ರತಿಮೆ ಮಾಡಲು ಮುಂದಾಗಿದ್ದರು. ಆಗ ದೇಶಾದ್ಯಂತ ಹೋರಾಟ ನಡೆಯಿತು.
ಇಡೀ ದೇಶಾದ್ಯಂತ ಗಾಂಧಿ ಕುಟುಂಬದ ಹೆಸರಿನಲ್ಲಿ ಪಾರ್ಕ್, ರಸ್ತೆ, ರೈಲ್ವೆ ನಿಲ್ದಾಣ, ಕ್ರೀಡಾಂಗಣ, ಸರ್ಕಾರ ಯೋಜನೆ, ಆಸ್ಪತ್ರೆ ಎಲ್ಲ ಇವೆ. ಆದರೆ, ಮಾಯಾವತಿಗೆ ದೊಡ್ಡ ತಪ್ಪು ಮಾಡಿದಂತೆ ಮಾಡಿದ್ದರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ತನ್ನ ಈ ದ್ವಂದ್ವ ನೀತಿ ಬಿಡಬೇಕು. ಸರ್ಕಾರದ ಯೋಜನೆಗಳಿಗೆ ಇವರ ಒಂದೆರಡು ಹೆಸರಿಟ್ಟರೆ ಅಡ್ಡಿಯಿಲ್ಲ. ಎಲ್ಲದ್ದಕ್ಕೂ ಅವರದ್ದೇ ಹೆಸರಿಡುತ್ತಾ ಹೋಗುವುದು ತಪ್ಪು ಎಂದು ಬೆಲ್ಲದ್ ಹೇಳಿದರು.