ಧಾರವಾಡ: ಶಹರ ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಅವರು ತಮ್ಮ ಸಿಬ್ಬಂದಿಯೊಂದಿಗೆ ನಗರದ ಮಾರುಕಟ್ಟೆ, ಬಸ್‍ನಿಲ್ದಾಣ, ಹೊಟೇಲ್ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ಕೊರೊನಾ ಜಾಗೃತಿ ಮೂಡಿಸಿದರು.
ಮಾರುಕಟ್ಟೆ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ವ್ಯಾಪಾರದಲ್ಲಿ ನಿರತರಾಗಿದ್ದ ಮಹಿಳೆಯರಿಗೆ, ಖರೀದಿದಾರರಿಗೆ ಸ್ವತಃ ಮಾಸ್ಕ್ಗಳನ್ನು ತೊಡಿಸಿ, ಕೊರೊನಾ ವೈರಸ್ ಕುರಿತು ಮುಂಜಾಗ್ರತೆ ವಹಿಸುವಂತೆ ತಿಳಿಸಿದರು. ಶಹರ ಠಾಣೆಯ ಸಿಬ್ಬಂದಿ ವಾಹನ ಸಂಚಾರರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ಮಾಸ್ಕ್ ನೀಡಿ, ಮಾಸ್ಕ್ ಧರಿಸಿಯೇ ಸಂಚರಿಸುವಂತೆ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಪಾಲನೆ ಕುರಿತು ದಂಡದ ಬದಲಾಗಿ ಉಚಿತ ಮಾಸ್ಕ್ ನೀಡುವ ಮೂಲಕ ಜನಜಾಗೃತಿ ಮೂಡಿಸಲು ಸ್ವತಃ ಎಸಿಪಿ ಅವರೇ ಕಾರ್ಯಾಚರಣೆಗೆ ಇಳಿದಿರುವುದು ಸಾರ್ವಜನಿಕರ ಗಮನ ಸೆಳೆಯಿತು.