ಧಾರವಾಡ : ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘ ಸಂತಾಪ ಸೂಚಿಸಿದೆ. ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮಸ್ಯೆ ಆತ್ಮಹತ್ಯೆವರೆಗೂ ಹೋಗಿದೆ, ವ್ಯವಸ್ಥೆ ಏನಾಗಿದೆ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಉ-ಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಸ್ ಪಾಟೀಲ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದೆವು. ಆಗ ಸುವರ್ಣಸೌಧದಲ್ಲಿ ಸಭೆ ಕರೆದಿದ್ದರು. ಎಲ್ಲ ವ್ಯವಸ್ಥೆ ಸರಿ ಮಾಡುತ್ತೇವೆ ಅಂದಿದ್ದರು. ಸಚಿವ ಸಿ.ಸಿ. ಪಾಟೀಲ ಭರವಸೆ ಕೊಟ್ಟಿದ್ದರು. ಮಾತುಕತೆ ಮಾಡಿದ್ದಕ್ಕೆ ಭರವಸೆ ಮೂಡಿತ್ತು. ಭ್ರಷ್ಟಾಚಾರ ಕಡಿಮೆ ಆಗುತ್ತೆ ಅಂದುಕೊಂಡಿದ್ದೆವು. ಆದರೆ, ಏನೂ ಬದಲಾಗಲಿಲ್ಲ, ಮುಂದಿನ ತಿಂಗಳು ಬೆಂಗಳೂರಿನಲ್ಲಿ ಹೋರಾಟ ಮಾಡುವವರಿದ್ದೆವು ಎಂದು ತಿಳಿಸಿದರು.
ಅವರು ಹಿರಿಯ ಸಚಿವ ಅಂತಾ ನೋಡಬಾರದು, ಕೂಡಲೇ ಅವರನ್ನು ವಿಚಾರಣೆಗೊಳಪಡಿಸಬೇಕು. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರದಿಂದ ಇಷ್ಟು ದಿನ ದುಡ್ಡು ಹೋಗುತ್ತಿತ್ತು. ಈಗ ಜೀವ ಹೋಗುವಂತಹ ಸ್ಥಿತಿ ಬಂದಿದೆ. ಈಶ್ವರಪ್ಪ ನೇರ ಹೊಣೆ ಅಂತಾ ಬರೆದಿದ್ದಾರೆ. ಸಾಯುವ ಮನುಷ್ಯ ಯಾವತ್ತೂ ಸುಳ್ಳು ಹೇಳುವುದಿಲ್ಲ. ಶಾಸಕರು, ಸಚಿವರು, ಅಧಿಕಾರಿಗಳು ಅಂಧಾ ದರ್ಬಾರ್ ನಡೆಸಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ಸಿಎಂ ಸರ್ಕಾರಿ ನಿವಾಸಕ್ಕೆ ಘೇರಾವ್, ನಾಳೆಯಿಂದ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ