ಹುಬ್ಬಳ್ಳಿ: ಕಾಂಗ್ರೆಸ್ ಪ್ರಧಾನಿ ಮೋದಿ ಅವರನ್ನು ತೇಜೋವಧೆ ಮಾಡುವ ಭರದಲ್ಲಿ ದೇಶಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದದಲ್ಲಿ ಇಂಡಿಯಾ ಫುಡ್ ಬ್ಯಾಂಕಿಂಗ್ ನೆಟ್ ವರ್ಕ್ ಸಂಸ್ಥೆ ವತಿಯಿಂದ ಕೊರೊನಾ ವಾರಿಯರ್ಸ್ಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೂಲ್ ಕಿಟ್ ವಿಚಾರಕ್ಕೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿ, ಕೊರೊನಾ ವೈರಸ್ ಹುಟ್ಟಿದ್ದೇ ಚೀನಾದಲ್ಲಿ. ಆದ್ರೆ ಕಾಂಗ್ರೆಸ್ ನಾಯಕರಾಗಲಿ, ಕಮ್ಯುನಿಸ್ಟ್ರಾಗಲಿ ಅದನ್ನು ಚೀನಾ ವೈರಸ್ ಎನ್ನಲಿಲ್ಲ. ಬದಲಿಗೆ ಮೋದಿ ವೈರಸ್ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರನ್ನು ತೇಜೋವಧೆ ಮಾಡೋ ಭರದಲ್ಲಿ ಕೈ ನಾಯಕರು ಭಾರತಕ್ಕೆ ಅಪಮಾನ ಮಾಡುತ್ತಿದ್ದಾರೆ. ದೇಶದ ಮಾನ ಮರ್ಯಾದೆ ಹೋದ್ರೂ ಚಿಂತೆಯಿಲ್ಲ, ಅವರಿಗೆ ಮೋದಿ ಹೆಸರು ಡ್ಯಾಮೇಜ್ ಆದ್ರೆ ಸಾಕು ಅಂತಿದಾರೆ. ಕಾಂಗ್ರೆಸ್ ಇಂತಹ ಕೀಳುಮಟ್ಟದ ರಾಜಕಾರಣ ಮಾಡಬಾರದು ಎಂದು ಕೇಂದ್ರ ಸಚಿವರು ಕಿಡಿಕಾರಿದರು.
ಲೋಕಸಭೆ ಚಳಿಗಾಲದ ಅಧಿವೇಶನ ನಡೆಯುತ್ತದೆ. ಈ ವಿಚಾರವಾಗಿ ಸಂಸತ್ನಲ್ಲಿಯೆ ಚರ್ಚಿಸಲಾಗುತ್ತದೆ. ಕಾಂಗ್ರೆಸ್ ಇಂತಹ ಸಂಕಷ್ಟ ಸಮಯದಲ್ಲಿ ಜನರ ಮನೋಭಾವ ಕುಗ್ಗಿಸುವ ಕೆಲಸ ಮಾಡಬಾರದಾಗಿತ್ತು. ದೇಶಕ್ಕೆ ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಬಾರದಿತ್ತು. ಪಿಎಂ ಕೇರ್ ನಿಂದ ಖರೀದಿಸಿದ ವೇಟಿಲೆಟರ್ ಕಳಪೆ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.