ಹುಬ್ಬಳ್ಳಿ: ನಾವೇನಿದ್ದರೂ ಸೇರಿಸುವುದಕ್ಕೆ ನೊಡುವವರೇ ಹೊರತು, ಮುರಿಯುವವರಲ್ಲ. ನಮ್ಮ ಪ್ರಯತ್ನ ಎಷ್ಟು ಸಫಲವಾಗುತ್ತದೆ ಎಂದು ಕಾದು ನೋಡೋಣ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಪತನಕ್ಕೆ ಯಾರು ಕಾರಣ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ನಾನ್ಯಾಕೆ ವಿಶ್ಲೇಷಣೆ ಮಾಡಲಿ?. ಮತ್ತೆ ಪುನರ್ವಿವಾಹಕ್ಕೆ ಸಾಧ್ಯ ಇದೆಯಾ ಅನ್ನೋದನ್ನು ನಾವು ನೋಡ್ತಾ ಇದ್ದೀವಿ ಎಂದು ಮರು ಮೈತ್ರಿ ಪ್ರಯತ್ನದ ಕುರಿತು ಪರೋಕ್ಷವಾಗಿ ಇಬ್ರಾಹಿಂ ಹೇಳಿದರು.
'ರಾಜಕೀಯ ರೈಲ್ವೆ ಸ್ಟೇಷನ್ ಆದಂತಿದೆ'
ರಾಜಕೀಯ ರೈಲ್ವೆ ಸ್ಟೇಷನ್ ಜಂಕ್ಷನ್ ಆದಂತಿದೆ. ಯಾರು ಹತ್ತಿ ಹೋಗುತ್ತಾರೆ, ಅವರು ದಡ ಸೇರಬೇಕು. ಕೆಲವರು ಬಿಜೆಪಿಗೆ ಹೋಗಿದ್ದಾರೆ. ನಾವು ಅದರಿಂದ ಸಫರ್ ಆಗಿದ್ದೇವೆ ಎಂದರು.
ಲವ್ ಜಿಹಾದ್: 'ಗಂಡ-ಹೆಂಡತಿ ರಾಜಿ ಆದ್ರೆ ಏನ್ ಮಾಡ್ಬೇಕು?'
ಕೆಲವೊಂದು ಕಾನೂನುಗಳನ್ನು ಮೋದಿ ತರುತ್ತಿದ್ದಾರೆ. ಲವ್ ಜಿಹಾದ್ನಲ್ಲಿ ಗಂಡ-ಹೆಂಡತಿ ರಾಜಿ ಆದ್ರೆ ಏನು ಮಾಡಲು ಆಗುತ್ತದೆ?. ಒತ್ತಾಯಪೂರ್ವಕವಾಗಿ ಮಾಡಿದ್ರೆ ಕ್ರಮ ಕೈಗೊಳ್ಳಲಿ. ರಾಜ್ಯ ಸರ್ಕಾರ ಇಂಥದ್ದರ ಬಗ್ಗೆ ಚಿಂತನೆ ಮಾಡುವುದು ಸರಿಯಲ್ಲ. ಯಾರು ಯಾರ ಜೊತೆ ಹೋಗುತ್ತಾರೆ ಅನ್ನೋದನ್ನು ನೋಡುತ್ತ ಕುಳಿತುಕೊಳ್ಳುವುದು ಸಿಎಂ ಕೆಲಸವೇ? ಎಂದು ಪ್ರಶ್ನಿಸಿದರು.
'ಬಂಜೆಯಾದ ಗೋವು ನೋಡಿಕೊಳ್ಳುವವರು ಯಾರು?'
ಗೋಹತ್ಯೆ ನಿಷೇಧಕ್ಕೆ ನಮ್ಮ ಬೆಂಬಲವಿದೆ. ಗೋವನ್ನು ಯಾರು ತಿನ್ನಬಾರದು ಎಂದು ಮುಸ್ಲಿಮರಿಗೆ ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ. ಆದರೆ, ಬಂಜೆಯಾದ ಗೋವುಗಳನ್ನು ನೋಡಿಕೊಳ್ಳುವವರು ಯಾರು?. ರೈತರು, ಚರ್ಮಕಾರಿಗಳು ಏನು ಮಾಡಬೇಕು?, ಅದಕ್ಕಾಗಿ ಗೋಸಾಕಾಣಿಕೆಯ ವ್ಯವಸ್ಥೆಯನ್ನು ನೀವು ಮಾಡಿಕೊಡಿ, ಇಲ್ಲವೇ ಪ್ರತಿ ಪಂಚಾಯತಿ ವ್ಯಾಪ್ತಿಗೆ ಒಂದು ಗೋಶಾಲೆ ತೆರೆಯಿರಿ ಎಂದರು.
ಕೊಡವರು ಗೋಮಾಂಸ ಸೇವನೆ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಮಾತನಾಡಿ, ಅದು ನನಗೆ ಗೊತ್ತಿಲ್ಲ. ಯಾವುದೇ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನಾನು ಚರ್ಚೆ ಮಾಡೋದಿಲ್ಲ ಎಂದರು.
'ಹೊರಟ್ಟಿ ಮುಖ್ಯಮಂತ್ರಿಯಾಗಲಿದ್ದಾರೆ'
ಕುಮಾರಸ್ವಾಮಿ, ಸಿದ್ದರಾಮಯ್ಯ ವಾಗ್ವಾದ ವಿಚಾರ ಎಲ್ಲಾ ಮಾಧ್ಯಮದವರಿಂದಲೇ ಚರ್ಚೆಗೆ ಬಂದಿದ್ದು ನೀವು ಬಿಡಬೇಕಲ್ಲ? ಎಂದರು. ಮುಂದೆ ರಾಜ್ಯಕ್ಕೆ ಒಳ್ಳೆಯದ್ದಾಗುತ್ತದೆ, ಹೊರಟ್ಟಿ ಅವರು ಪಕ್ಷದ ಅಧ್ಯಕ್ಷರಾಗಲಿದ್ದಾರೆ. ಮುಖ್ಯಮಂತ್ರಿಯೂ ಆಗುತ್ತಾರೆ, ನಾ ಸುಮ್ಮನೆ ಹೇಳುವುದಿಲ್ಲ, ಎಲ್ಲದಕ್ಕೂ ಕಾರಣ ಇರುತ್ತದೆ, ಕಾದು ನೋಡಿ ಎಂದರು.