ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ಚರ್ಚೆ ಮಾಡಿಲ್ಲ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ ಎನ್ನುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ಮಾಡೋಕೆ ಇಷ್ಟಪಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಅಶೋಕ ನಗರದ ನಿವಾಸದಲ್ಲಿ ಮಾತನಾಡಿದ ಸಿಎಂ, ಕೊರೊನಾ ನಿಯಂತ್ರಣ ಮಾಡೋಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ತಜ್ಞರ ಜೊತೆ ಮಾತಾಡಿ, ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಜಿಲ್ಲೆಗಳಿಂದ ಅಂತಿಮ ವರದಿ ತರಿಸಿ ಸಾರ್ವಜನಿಕ ಗಣೇಶೋತ್ಸವದ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಸಿಲಿಂಡರ್, ತೈಲ ಬೆಲೆ ಏರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಆಗಿದೆ. 5 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಲಿದ್ದಾರೆ. ಅವರ ಜೊತೆ ಚರ್ಚೆ ಮಾಡಿ ಮಾತಾಡುವೆ ಎಂದ ಬೊಮ್ಮಾಯಿ, ಇಂದು ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಪೊಲೀಸ್ ಸ್ಕೂಲ್ ಉದ್ಘಾಟನೆ ಇದೆ. ಅಲ್ಲಿನ ಕಾರ್ಯಕ್ರಮಗಳಲ್ಲಿ ನಾವು ಭಾಗಿಯಾಗಲಿದ್ದೇವೆ ಎಂದರು.
ಇದನ್ನೂ ಓದಿ: ಸೆಪ್ಟೆಂಬರ್ 7ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ
ಕೇರಳ ಗಡಿಯಿಂದ ಕರ್ನಾಟಕಕ್ಕೆ ನಕಲಿ ಆರ್ಟಿಪಿಸಿಆರ್ ನೆಗಟಿವ್ ರಿಪೋರ್ಟ್ ಪಡೆದು ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಎಲ್ಲವನ್ನ ಚೆಕ್ ಮಾಡಿ ಈಗ ಬಿಡಲಾಗುತ್ತಿದೆ. ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಅಶೋಕ ನಗರ ನಿವಾಸದಲ್ಲಿ ನೂರಾರು ಜನರ ಅಹವಾಲು ಸ್ವೀಕರಿಸಿದ ಸಿಎಂ ಬೊಮ್ಮಾಯಿ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದರು. ಆದರೆ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂತು.
ಸಿದ್ಧಾರೂಢ ಶ್ರೀಗಳ ಗದ್ದುಗೆ ದರ್ಶನ ಪಡೆದ ಸಿಎಂ
ಬಸವರಾಜ ಬೊಮ್ಮಾಯಿ ಅವರು ಸಿಎಂ ಆದಾಗಿನಿಂದಲೂ ಸಿದ್ಧಾರೂಢ ಶ್ರೀಗಳ ಗದ್ದುಗೆ ದರ್ಶನ ಪಡೆದಿರಲಿಲ್ಲ. ಇಂದು ಬೆಳ್ಳಂಬೆಳಗ್ಗೆ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಅವರು, ಸಿದ್ಧಾರೂಢರು ಹಾಗೂ ಗುರುನಾಥರೂಢರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.