ಹುಬ್ಬಳ್ಳಿ: ಸ್ವಾತಂತ್ರ್ಯ ದೊರಕಿ 75 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಯೊಂದು ಸರ್ಕಾರಿ ಕಾರ್ಯಾಲಯ ಹಾಗೂ ಮನೆಯ ಮೇಲೆಯೂ ರಾಷ್ಟ್ರೀಯ ಧ್ವಜವನ್ನು ಹಾರಿಸುವ ನಿರ್ಧಾರವನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಧ್ವಜವನ್ನು ಸಂದಾಯ ಮಾಡಲು ಕೇಂದ್ರ ಸರ್ಕಾರ ದೇಶದಲ್ಲಿರುವ ಸಂಸ್ಥೆಗಳಿಗೆ ಬಿಟ್ಟು ಚೀನಾ ದೇಶಕ್ಕೆ ಧ್ವಜವನ್ನು ತಯಾರಿಸಲು ಟೆಂಡರ್ ಕೊಟ್ಟಿರುವ ಮಾತೊಂದು ಕೇಳಿ ಬಂದಿದೆ ಎಂದು ಖಾದಿ ಗ್ರಾಮೋದ್ಯೋಗ ಒಕ್ಕೂಟದ ಅಧ್ಯಕ್ಷ ಕೆ.ವಿ.ಪತ್ತಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲದೇ ಇಷ್ಟು ದಿನ ರಾಷ್ಟ್ರೀಯ ಧ್ವಜವನ್ನು ಖಾದಿ ಬಟ್ಟೆಯಿಂದ ಮಾತ್ರ ತಯಾರಿಸಬೇಕಿತ್ತು. ಧ್ವಜ ಸಂಹಿತೆಯನ್ನು ಪಾಲಿಸಿ ರಾಷ್ಟ್ರಧ್ವಜ ತಯಾರಿಸಲಾಗುತ್ತಿದೆ. ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕೆ ಸಂಸ್ಥೆ ಎಂಬ ಹೆಗ್ಗಳಿಕೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಇದೆ. ಆದರೆ ಈಗ ಕೇಂದ್ರ ಸರ್ಕಾರ ಬೇರೆ ಬೇರೆ ಬಟ್ಟೆಗಳಿಗೆ ರಾಷ್ಟ್ರೀಯ ಧ್ವಜ ತಯಾರಿಸಲು ಅನುಮತಿ ನೀಡಿದ್ದು, ಮತ್ತೊಮ್ಮೆ ಖಾದಿ ಗ್ರಾಮೋದ್ಯೋಗಕ್ಕೆ ಹೊಡೆತ ಬೀಳುವ ಮೂಲಕ ಖಾದಿ ಗ್ರಾಮೋದ್ಯೋಗ ಮೂಲೆ ಸೇರುವ ಆತಂಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಖಾದಿ ಗ್ರಾಮೋದ್ಯೋಗ ಒಕ್ಕೂಟದ ನಿರ್ದೇಶಕ ಬಿ.ಬಿ.ಪಾಟೀಲ್ ಮಾತನಾಡಿ, ಈಗಾಗಲೇ ಆನ್ಲೈನ್ ಮಾರುಕಟ್ಟೆಯ ಮೂಲಕ ವ್ಯಾಪಾರ ವಹಿವಾಟು ಆರಂಭಿಸಿರುವ ಖಾದಿ ಗ್ರಾಮೋದ್ಯೋಗದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜದ ಬೇಡಿಕೆ ಹೆಚ್ಚಾಗಿ ಆರ್ಥಿಕತೆ ಹೆಚ್ಚುತ್ತದೆ. ಪ್ರತಿ ವರ್ಷ 3 ಕೋಟಿಗೂ ಹೆಚ್ಚು ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಅದರಲ್ಲೂ ಈ ಬಾರಿ ಅತಿಹೆಚ್ಚು ಲಾಭ ಗಳಿಬಹುದು ಎಂಬ ಕನಸಿಗೆ ಕೇಂದ್ರ ಸರ್ಕಾರ ನೀರೆರಚಿದೆ.
ಬಿಎಸ್ಐ ಮಾನದಂಡ ಪಾಲಿಸದೆ ಪಾಲಿಸ್ಟರ್ ಹಾಗೂ ಇನ್ನಿತರ ಬಟ್ಟೆಗಳಿಂದ ಧ್ವಜವನ್ನು ತಯಾರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ ರಾಷ್ಟ್ರಧ್ವಜದ ಘನತೆ ಗೌರವಕ್ಕೆ ಧಕ್ಕೆಯಾಗಲಿದೆ. ಯುವ ಸಮುದಾಯವನ್ನು ಸೆಳೆಯಲು ಹಾಗೂ ಖಾದಿ ಗ್ರಾಮೋದ್ಯೋಗವನ್ನು ಉತ್ತೇಜಿಸಲು ಸರ್ಕಾರ ಹಲವಾರು ಯೋಜನೆ ಜಾರಿಗೊಳಸಿಬೇಕಿತ್ತು. ಆದರೆ ಸರ್ಕಾರವೇ ಖಾದಿ ಗ್ರಾಮೋದ್ಯೋಗದ ಬಗ್ಗೆ ನಿಷ್ಕಾಳಜಿ ತೋರುತ್ತಿರುವುದು ಉದ್ಯಮ ನಂಬಿಕೊಂಡವರಿಗೆ ನಿರಾಸೆಯುಂಟು ಮಾಡಿದೆ ಎಂದರು.