ಹುಬ್ಬಳ್ಳಿ: ದೇಶದ ರಾಷ್ಟ್ರ ಧ್ವಜ ಅನ್ನದಾತನ ಬೇವರಿನ ಕೂಸು. ಆದರೆ, ಕೇಂದ್ರ ಸರ್ಕಾರದ ಒಂದು ನಿರ್ಧಾರ ರಾಷ್ಟ್ರಧ್ವಜ ಗೌರವಕ್ಕೆ ಧಕ್ಕೆಯಾಗುವ ಆತಂಕ ಸೃಷ್ಟಿಸಿದೆ. ಯಾವ ಬಟ್ಟೆಯಿಂದಾದರೂ ರಾಷ್ಟ್ರ ಧ್ವಜ ತಯಾರಿಸಬಹುದು ಎಂಬುದು ರೈತ ಸಂಕುಲವನ್ನು ಕಂಗಾಲಾಗಿಸಿದೆ.
ಧ್ವಜ ನೀತಿ ಸಂಹಿತೆಯನ್ನು ಬದಲಾವಣೆ ಮಾಡಿದ ಕೇಂದ್ರ ಸರ್ಕಾರ ನೇರವಾಗಿ ರೈತರ ಬೆನ್ನಿಗೆ ಚೂರಿ ಹಾಕಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹುಚ್ಚು ನಿರ್ಧಾರಕ್ಕೆ ಈಗ ದೇಶದ ಅನ್ನದಾತ ಕಷ್ಟ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರದ ಹುಚ್ಚು ನಿರ್ಧಾರದಿಂದ ಒಂದು ಕಡೆ ಮುಚ್ಚುವ ಹಂತದಲ್ಲಿ ಕೈಮಗ್ಗಗಳು. ಇನ್ನೊಂದು ಕಡೆ ರೈತರ ಬೆಳೆದ ಹತ್ತಿಯನ್ನ ಖರೀದಿ ಮಾಡುವವರು ಯಾರು ಎಂಬುವಂತ ಪ್ರಶ್ನೆ ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ಇದರಿಂದಾಗಿ ಕೇಂದ್ರ ಸರ್ಕಾರದ ಯಡಬಿಂಡಗಿ ತನದಿಂದ ದಿಕ್ಕು ದೋಚದಂತಾದ ಅನ್ನದಾತ. ಹೇಗೆ ಜೀವನ ನಡೆಸಬೇಕು ಎಂದು ಕಣ್ಣೀರು ಹಾಕುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿಯೇ 56,319 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ 4.5 ಲಕ್ಷ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತದೆ. ಸಾವಿರಾರು ಟನ್‌ಗಳಷ್ಟು ಹತ್ತಿಯನ್ನು ಎಲ್ಲಿ ಮಾರಾಟ ಮಾಡಬೇಕೆನ್ನುವ ಚಿಂತನೆಯಲ್ಲಿ ರೈತರಿದ್ದು, ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಎಲ್ಲ ಬಟ್ಟೆಗಳಿಂದ ಧ್ವಜ ತಯಾರಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೇ ಕೇಂದ್ರ ಸರ್ಕಾರ ಚೀನಾದಿಂದಲೂ ರಾಷ್ಟ್ರಧ್ವಜಗಳನ್ನು ಆಮದು ಮಾಡಿಕೊಳ್ಳುವ ಸಿದ್ದತೆ ನಡೆಸಿದೆ. ಇದರಿಂದ ಈ ವರ್ಷ ಬೆಂಗೇರಿಯ ಖಾದಿ ಧ್ವಜಗಳಿಗೆ ಬೇಡಿಕೆ ಕಡಿಮೆಯಾಗುವ ಭೀತಿ ಎದುರಾಗಿದೆ.
ಒಟ್ಟಿನಲ್ಲಿ ಧ್ವಜ ತಯಾರಿಕೆ ನಿಂತರೆ ಕೈಮಗ್ಗ, ಕೈಮಗ್ಗ ನಿಂತರೆ ಹತ್ತಿ ಬೆಳೆದ ರೈತ ಹೀಗೆ ಸಂಕಷ್ಟ ಎದುರಾಗುತ್ತದೆ. ಕೇಂದ್ರ ಸರ್ಕಾರ ಧ್ವಜ ನೀತಿಯನ್ನು ಬದಲಾಯಿಸಿ ಅನ್ನದಾತನ ಹೊಟ್ಟೆಯ ಮೇಲೆ ಹೊಡೆದಿದೆ. ಗಾಂಧೀಜಿಯವರ ಕಂಡ ಕನಸಿಗೆ ಎನ್‌ಡಿಎ ಸರ್ಕಾರ ದ್ರೋಹ ಬಗೆದಿದೆ. ಇನ್ನಾದರೂ ನರೇಂದ್ರ ಮೋದಿಯವರು ಎಚ್ಚೆತ್ತುಕೊಂಡು ಖಾದಿಯಿಂದ ಸಿದ್ದವಾಗುವ ರಾಷ್ಟ್ರಧ್ವಜಗಳಿಗೆ ಮಾತ್ರ ಅವಕಾಶ ನೀಡಬೇಕು. ಹೊಸ ಧ್ವಜ ನೀತಿಯನ್ನು ತೆಗೆದುಹಾಕಿ ಅನ್ನದಾತನ ಬೆನ್ನಿಗೆ ನಿಲ್ಲಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ 'ಟೆಂಟ್ ಟೂರಿಸಂ': ಮೈಸೂರಿನ ಲಲಿತ ಮಹಲ್ ಹೋಟೆಲ್ ಆವರಣ ಆಯ್ಕೆ