ಹುಬ್ಬಳ್ಳಿ: ರಾಷ್ಟ್ರೀಯ ಸುರಕ್ಷತೆ, ಭದ್ರತೆ ಸೇರಿದಂತೆ ರೈತಪರ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ನದಿ ಜೋಡಣೆ, ರಾಷ್ಟ್ರೀಯ ಹೆದ್ದಾರಿ, ಬಯಲು ಶೌಚಾಲಯ ಮುಕ್ತ ರಾಷ್ಟ್ರ, ಶಿಕ್ಷಣ ಹಾಗೂ ಸೇವಾ ಭದ್ರತೆಯ ಸದುದ್ದೇಶವನ್ನು ಪ್ರಣಾಳಿಕೆ ಹೊಂದಿದೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಮೋಹನ ಲಿಂಬಿಕಾಯಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಣಾಳಿಕೆಯನ್ನು ದೇಶದ ಜನರ ಅಭಿಪ್ರಾಯದ ಮೇಲೆ ಸಿದ್ಧಪಡಿಸಲಾಗಿದೆ. 2030ರ ವೇಳೆಗೆ ಭಾರತ ಬಡತನ ನಿರ್ಮೂಲನೆ, 130 ಕೋಟಿ ಜನರಿಗೆ ಸಹಾಯವಾಗುವ ಯೋಜನೆ ಸೇರಿ ಹಲವು ಮಹತ್ವದ ಯೋಜನೆಗಳು ಇದರಲ್ಲಿ ಇವೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಅಲ್ಪಸಂಖ್ಯಾತರ ಮತ ಪಡೆಯಲು ಬಿಜೆಪಿ ಅಭ್ಯರ್ಥಿ ಮತದಾರರ ಚೀಟಿ ಸಂಗ್ರಹಿಸಿದ್ದಾರೆ ಎಂಬುದು ಸತ್ಯಕ್ಕೆ ದೂರುವಾದ ಮಾತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದರಾಗಿ ಪ್ರಹ್ಲಾದ್ ಜೋಶಿ ಉತ್ತಮ ಕೆಲಸ ಮಾಡಿದ್ದಾರೆ. ನಾವು ಅಂತಹ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಈ ಬಗ್ಗೆ ಆರೋಪ ಮಾಡಿದವರನ್ನೇ ಕೇಳಬೇಕು. ಇದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.