ಧಾರವಾಡ: ಅತೃಪ್ತ ಶಾಸಕರ ಅನರ್ಹತೆ ವಿಚಾರದಿಂದ ಬಿಜೆಪಿಗೆ ಒಳಗೊಳಗೆ ಖುಷಿ ಆಗಿದೆ. ಇವರ ಕಾಟ ಬಿಜೆಪಿಯವರಿಗೆ ತಪ್ಪಿದಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಅವರು ತಮ್ಮ ಇತಿಮಿತಿಯಲ್ಲಿ ಕಾಯ್ದೆ, ಕಾನೂನುಗಳನ್ನು ನೋಡಿ ಶಾಸಕರನ್ನು ಅನರ್ಹತೆ ಮಾಡಿದ್ದಾರೆ. ಒಂದು ಪಕ್ಷದಿಂದ ಸ್ಪರ್ಧಿಸಿ ತಮಗೆ ಬೇಕಾದಾಗ ರಾಜೀನಾಮೆ ನೀಡುವುದು ಸರಿಯಾದ ಕ್ರಮವಲ್ಲ.
ಈ ವಿಚಾರವಾಗಿ ಸ್ಪೀಕರ್ ಒಳ್ಳೆಯ ನಿರ್ಣಯ ಮಾಡಿದ್ದಾರೆ. ರಾಜೀನಾಮೆ ಕೊಟ್ಟರೆ ಮುಂದಿನ ಐದು ವರ್ಷದ ಅವಧಿಯೊಳಗೆ ಯಾವುದೇ ಚುನಾವಣೆಗೆ ನಿಲ್ಲದಂತಹ ಕಟ್ಟುನಿಟ್ಟಿನ ಕಾನೂನುಗಳು ರಾಜಕಾರಣದಲ್ಲಿ ಬರಬೇಕು. ಒಂದು ಕಟ್ಟುನಿಟ್ಟಾದ ಕಾನೂನನ್ನು ಮೋದಿಯವರೇ ತರಬೇಕು. ಮೋದಿಯವರು ದೇಶದ ಬಗ್ಗೆ ಬಹಳ ಮಾತನಾಡುತ್ತಾರೆ. ಹೀಗಾಗಿ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನು ಅವರೇ ತರಲಿ ಎಂದು ಆಗ್ರಹಿಸಿದರು.
ಸದ್ಯ ಬಿಜೆಪಿ ಬಳಿಯು ಕಡಿಮೆ ಬಹುಮತ ಇರುವುದರಿಂದ ಈ ಸರ್ಕಾರ ಕೂಡ ಸ್ಥಿರವಲ್ಲ. ಸ್ಪೀಕರ್ ನಡೆ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲಾ ಕಾಯ್ದೆ, ಕಾನೂನು ನೋಡಿ ಅವರು ಅನರ್ಹ ಮಾಡಿದ್ದಾರೆ. ರಾಜೀನಾಮೆ ಕೊಟ್ಟ ಬಳಿಕ ಅವರು ಸದನದಲ್ಲಿ ಇರಬೇಕಿತ್ತು. ಹೀಗಾಗಿ ರಾಜೀನಾಮೆ ಅಂಗೀಕರಿಸದೇ ಅನರ್ಹ ಮಾಡಲಾಗಿದೆ. ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತಿದ್ದರೆ ಅಂಗೀಕಾರ ಆಗುತ್ತಿತ್ತು. ಆದರೆ ಅವರು ನಿಯಮ ಪಾಲಿಸಿಲ್ಲ. ಎಲ್ಲರೂ ಒಟ್ಟಾಗಿ ಮುಂಬೈ ರೆಸಾರ್ಟ್‌ನಲ್ಲಿದ್ದರು. ಹೀಗಾಗಿ ರಾಜೀನಾಮೆ ಅಂಗೀಕಾರದ ಬದಲಿಗೆ ಅನರ್ಹ ಮಾಡಿದ್ದಾರೆ ಎಂದರು.
ಇನ್ನು ಬಿಜೆಪಿಗೆ ಜೆಡಿಎಸ್ ನೈತಿಕ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಿ.ಟಿ.ದೇವೇಗೌಡರು ಬಿಜೆಪಿಗೆ ನೈತಿಕ ಬೆಂಬಲ ಕೊಡೋ ವಿಚಾರ ಹೇಳಿದ್ದು ಸರಿಯಲ್ಲ ಎಂದು ತಿರುಗೇಟು ನೀಡಿದರು.