ಹುಬ್ಬಳ್ಳಿ: ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆ ತಿದ್ದಪಡಿ ಮಾಡಿರುವುದನ್ನು ಖಂಡಿಸಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ಮಾಡಿದರು.
ವಾಹನ ಚಾಲನೆಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದ್ದು ಖಂಡನೀಯ, ಪೊಲೀಸರು ಸಣ್ಣ ಪುಟ್ಟ ತಪ್ಪಿಗೆ, ಸಣ್ಣ ವಾಹನ ಚಾಲಕರಿಗೂ ಹತ್ತು ಸಾವಿರ ದಂಡ ವಿಧಿಸುತ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ದುಡಿದರೂ ಕೂಲಿ ದೊರೆಯದ ಸಂದರ್ಭದಲ್ಲಿ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯಿಂದ ಹಾಕುವ ದಂಡ ಬಡ ಚಾಲಕರಿಗೆ ಬರೆಯಾಗಿದೆ. ಅಲ್ಲದೇ ಹುಬ್ಬಳ್ಳಿ-ಧಾರವಾಡದ ರಸ್ತೆಗಳು ಮೊದಲೇ ಹದಗೆಟ್ಟು ಹೋಗಿದೆ. ಅಂತಹದರಲ್ಲಿ ಪೊಲೀಸರು ರಸ್ತೆ ಮಧ್ಯದಲ್ಲಿಯೇ ಹಿಡಿದು ಅಧಿಕ ಮೊತ್ತದ ದಂಡ ವಿಧಿಸುತ್ತಾರೆ. ಕೂಡಲೇ ಕೇಂದ್ರ ಸರ್ಕಾರ ಈ ಕಾಯ್ದೆಯಲ್ಲಿ ಸುಧಾರಣೆ ತರಬೇಕೆಂದು ಆಗ್ರಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗ್ಗಿ ಆಕ್ರೋಶ ಹೊರಹಾಕಿದರು.
ಆಟೋ ಚಾಲಕರು ಪ್ರತಿ ನಿತ್ಯ ದುಡಿದರು ತುತ್ತಿನ ಚೀಲಾ ತುಂಬಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಬಡ ಆಟೋ ಚಾಲಕರಿಗೆ ಸರ್ಕಾರ ವಸತಿ ಯೋಜನೆ ಜಾರಿ ಮಾಡಬೇಕು. ಅಲ್ಲದೇ ಆಟೋ ಚಾಲನಾ ಪ್ರಮಾಣ ಪತ್ರ ಪಡೆಯಲು ಶಿಕ್ಷಣ ಕಡ್ಡಾಯ ಎಂಬ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಅನಕ್ಷರಸ್ಥರು ಚಾಲನೆ ಪರವಾನಗಿ ಪಡೆಯುವಂತೆ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.