ಹುಬ್ಬಳ್ಳಿ : ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಶ್ರೀ ಮಲ್ಲಿಕಾರ್ಜುನ ಅಲೆಮಾರಿ ದಾಲಪಟಾ ಕಲಾವಿದರ ಸಂಘ ಹಾಗೂ ಶ್ರೀ ಅಲೆಮಾರಿ ಜಾನಪದ ಗೊಂಬೆ ಕುಣಿತ ಕಲಾವಿದರ ಸಂಘದ ಸದಸ್ಯರು ನಗರದಲ್ಲಿಂದು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟಿಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾವಣೆಗೊಂಡ ಸಂಘದ ಕಲಾವಿದರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಪಾದಯಾತ್ರೆ ಮೂಲಕ ಭಿಕ್ಷಾಟನೆ ಮಾಡುತ್ತಾ ತಹಶೀಲ್ದಾರರ ಕಚೇರಿವರೆಗೆ ಬಂದು ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಕಷ್ಟದಲ್ಲಿ ಕಲಾವಿದರು : ಈ ವೇಳೆ ಸಂಘದ ಅಧ್ಯಕ್ಷ ಪ್ರಕಾಶ್ ಜಾಡರ್ ಮಾತನಾಡಿ, ಮೊದಲೇ ಕೊರೊನಾ, ಲಾಕ್ಡೌನ್ನಿಂದಾಗಿ ಕಲಾವಿದರು ಕೆಲಸವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಸಹಿತ ಸರ್ಕಾರ ಉತ್ಸವ ಮತ್ತು ಜಯಂತಿಗಳ ಆಚರಣೆಗೆ ಅನುಮತಿ ನೀಡಿಲ್ಲ. ಪರಿಣಾಮ ಉತ್ಸವಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಅತಂತ್ರಗೊಂಡಿದೆ. ನಿತ್ಯದ ಬದುಕು ನಡೆಸುವುದೇ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ಬಹಿರಂಗ: ರೂ. 500 ಕೊಡದಿದ್ದಕ್ಕೆ ಗುಂಡು ಹಾರಿಸಿಕೊಂಡನಾ?
ಈ ಹಿನ್ನೆಲೆ ಇತರೆ ಕ್ಷೇತ್ರಗಳಿಗೆ ಕೊರೊನಾ ಮಾರ್ಗಸೂಚಿಗಳಂತೆ ವ್ಯಾಪಾರ, ವಹಿವಾಟು ನಡೆಸಲು ಅನುಮತಿ ನೀಡಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.