ಹುಬ್ಬಳ್ಳಿ (ಧಾರವಾಡ): ಕೋವಿಡ್ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ.
ವೇದಾಂತ ಕಂಪನಿಯು 100 ಬೆಡ್ ಹೊಂದಿರುವ ಆಸ್ಪತ್ರೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿ ಕಿಮ್ಸ್ಗೆ ಹಸ್ತಾಂತರ ಮಾಡಿದೆ. ಆದರೆ ಕಿಮ್ಸ್ ಹಾಗೂ ಜಿಲ್ಲಾಡಳಿತದ ನಿಷ್ಕಾಳಜಿಯಿಂದ ಆಸ್ಪತ್ರೆ ನಿರ್ವಹಣೆಯಿಲ್ಲದೇ ಸೊರಗುತ್ತಿದೆ. ಎಲ್ಲಿ ನೋಡಿದ್ರೂ ಕಸ, ಜಾಡು ಹಾಗೂ ಧೂಳು ತುಂಬಿರುವ ಬೆಡ್ ಇವೆಲ್ಲವೂ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
100 ಬೆಡ್ಗಳ ಪೈಕಿ 80 ಜನರಲ್ ಬೆಡ್, 10 ವೆಂಟಿಲೇಟರ್ ಬೆಡ್ ಹಾಗೂ 10 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಎರಡನೇ ಅಲೆ ವೇಳೆ ಕೋವಿಡ್ ತೀವ್ರತೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬೆಡ್ ಕೊರತೆಯನ್ನು ನೀಗಿಸುವ ಸದುದ್ದೇಶದಿಂದ ಈ ಒಂದು ಕೋವಿಡ್ ಹಾಸ್ಪಿಟಲ್ ರೂಪುಗೊಂಡಿದೆ. ಅಲ್ಲದೇ ಮೂರನೇ ಅಲೆಯು ಜನರಲ್ಲಿ ಆತಂಕ ಹುಟ್ಟು ಹಾಕಿದ್ದು, ಕಿಮ್ಸ್ ಮಾತ್ರ ವೇದಾಂತ ಆಸ್ಪತ್ರೆ ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವ ಆರೋಪವಿದೆ.
ಇದನ್ನೂ ಓದಿ: ವೈಕುಂಠ ಏಕಾದಶಿ ಆಚರಣೆಗೆ ಕೊರೊನಾ ಬ್ರೇಕ್: ದೇವರ ಫೋಟೋ ಹೊರಗಿಟ್ಟು ಪೂಜೆ ಸಲ್ಲಿಸಿದ ಭಕ್ತರು
ದಾನಿಗಳು ಕೊಟ್ಟಿರುವ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಕಿಮ್ಸ್ ಹಾಗೂ ಜಿಲ್ಲಾಡಳಿತ ನಿಷ್ಕಾಳಜಿ ತೋರಿಸುತ್ತಿರುವುದಾದರೂ ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.