ಧಾರವಾಡ: ಮೇಲ್ಛಾವಣಿ ಸಂಪೂರ್ಣವಾಗಿ ಕಿತ್ತು ಬಂದಿರುವ ಮನೆಯಲ್ಲಿ ಬಡ ಕುಟುಂಬ ವಾಸವಾಗಿದೆ ಎಂದರೆ ನಂಬಲೇಬೇಕು. ಬಡತನದ ಬೇಗೆಯಲ್ಲಿ ನೊಂದು ಬೆಂದಿರುವ ಪತಿ, ಪತ್ನಿ ಹಾಗೂ ಮೂವರು ಮಕ್ಕಳಿರುವ ಕುಟುಂಬಕ್ಕೆ ಮುಂದಿನ ದಾರಿ ಕಾಣದೇ ಹಾನಿಯಾಗಿರುವ ಮನೆಯ ಒಂದು ಭಾಗದಲ್ಲೇ ವಾಸ ಮಾಡುತ್ತಿರುವುದು ಮನ ಕಲಕುವಂತಿದೆ.
ಧಾರವಾಡದ ಬಸವನಗರದ ಪುರಂದರ ಮೋತಿಲಾಲ ಲಾಂಡಗೆ ಎಂಬುವವರ ಮನೆ ಮಳೆಯಿಂದ ಬಹುತೇಕ ಹಾನಿಯಾಗಿದೆ. ಅಕ್ರಮ ಸಕ್ರಮ ಸ್ಥಳದಲ್ಲಿ ಮನೆ ಕಟ್ಟಿಕೊಂಡಿದ್ದರು. ಆದ್ರೀಗ ಮನೆ ಮಳೆಯಿಂದ ಬಿದ್ದುಹೋಗುವ ಹಂತಕ್ಕೆ ಬಂದಿದೆ. ಮೇಲ್ಛಾವಣಿಯಂತೂ ಬಹುತೇಕ ಹಾನಿಯಾಗಿದೆ.
ಪುರಂದರ ಅವರಿಗೆ ಅನಾರೋಗ್ಯ ಕಾಡುತ್ತಿದ್ದು, ಅವರ ತಂದೆ ತಾಯಿ ಅನಾರೋಗ್ಯದಿಂದ ಬಳಲಿ ನಿಧನ ಹೊಂದಿದ್ದಾರೆ. ತೀವ್ರ ಬಡತನದ ಮಧ್ಯೆ ಸಾಲ ಮಾಡಿಕೊಂಡು ಗೂಡ್ಸ್ ಕ್ಯಾರಿಯರ್ ವಾಹನ ತೆಗೆದುಕೊಂಡಿದ್ದರು. ಆದರೆ ಕಂತು ಕಟ್ಟದ್ದಕ್ಕೆ ಸೀಜ್ ಆಗಿದೆ. ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದೆ. ಹೀಗಾಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ: ಹೋಟೆಲ್ನಲ್ಲಿ ತಂಗುವ ಅತಿಥಿಗಳಿಗೆ ಆರ್ಟಿಪಿಸಿಆರ್ ಕಡ್ಡಾಯ: ಧಾರವಾಡ ಡಿಸಿ
ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು ಕೂಡಾ ಅಕ್ರಮ ಸಕ್ರಮ ಆಗಿರುವುದರಿಂದ ಎನ್.ಎ ಇದ್ದರೆ ಮಾತ್ರ ಮಾಡಿಸಿಕೊಡುತ್ತೇವೆ ಎಂದು ಹೇಳುತ್ತಿದ್ದಾರಂತೆ. ಪುರಂದರ ಅವರು ಸ್ವಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡು ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದಾರೆ. ಅವರ ಮಗ ಓಂಕಾರ ಅವರು ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಇದೀಗ ಮನೆ ನಿರ್ಮಾಣ ಮಾಡಿಕೊಳ್ಳುಲು ಸಹ ಕುಟುಂಬ ಪರದಾಡುವಂತಾಗಿದೆ.