ಹುಬ್ಬಳ್ಳಿ: ನಾವೆಲ್ಲ ಪಕ್ಷಿ ಪ್ರೇಮಿ ಸಲೀಂ ಅಲಿ ಬಗ್ಗೆ ಕೇಳಿದ್ದೇವೆ. ಹಾಗೆಯೇ ಹುಬ್ಬಳ್ಳಿಯಲ್ಲೊಬ್ಬರು ಮನೆಯ ಟೆರೆಸ್ ಮೇಲೆ 50 ಕ್ಕೂ ಹೆಚ್ಚು ಪಕ್ಷಿಗಳನ್ನು ಸಾಕಿ, ಸಲಹುವ ಮೂಲಕ ಪಕ್ಷಿ ಪ್ರೇಮ ಮೆರೆಯುತ್ತಿದ್ದಾರೆ.
ಹುಬ್ಬಳ್ಳಿಯ ಬೆಂಗೇರಿಯ ವೆಂಕಟೇಶ್ವರ ಕಾಲೋನಿಯ ನಿವಾಸಿ ದೇವಾನಂದ್ ಜಗಾಪೂರ ಎಂಬುವರು ತಮ್ಮ ಮನೆಯ ಟೆರೆಸ್ ಮೇಲೆ 50 ಕ್ಕೂ ಹೆಚ್ಚು ಲವ್ ಬರ್ಡ್ಸ್ ಸಾಕಿದ್ದಾರೆ. ಮೊದಲು ಹವ್ಯಾಸಕ್ಕಾಗಿ ನಾಯಿ, ಪಾರಿವಾಳ ಸಾಕುತ್ತಿದ್ದ ಇವರು, ಈಗ ಐವತ್ತಕ್ಕೂ ಹೆಚ್ಚು ಪಕ್ಷಿಗಳನ್ನು ಸಾಕಿ ಸಲಹುತ್ತಿದ್ದಾರೆ. ಇದಕ್ಕಾಗಿಯೇ ಮನೆಯ ಮೇಲ್ಚಾವಣಿಯಲ್ಲಿ ಒಂದು ಶೆಡ್ ನಿರ್ಮಾಣ ಮಾಡಿ, ಪಕ್ಷಿಗಳಿಗಾಗಿ ಅರಣ್ಯದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ.
ಸದ್ದಿಲ್ಲದೆ ಪಕ್ಷಿಪ್ರೇಮ ಮೆರೆಯುತ್ತಿರುವ ಇವರು ಮುಂಬರುವ ದಿನಗಳಲ್ಲಿ 200 ಕ್ಕೂ ಹೆಚ್ಚು ಪಕ್ಷಿಗಳ ಪಾಲನೆ ಮಾಡುವ ಗುರಿ ಹೊಂದಿದ್ದಾರೆ. ದೇವಾನಂದ್ ಅವರು ಈ ಕೆಲಸಕ್ಕೆ ಮನೆಯವರು ಸಹ ಸಾಥ್ ನೀಡಿದ್ದಾರೆ. ಮಕ್ಕಳು, ಮೊಮ್ಮಕ್ಕಳು ಕೂಡ ಈ ಲವ್ ಬರ್ಡ್ಸ್ ಪೋಷಣೆಗೆ ಕೈಜೋಡಿಸಿ ಅಜ್ಜನ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.