ಹುಬ್ಬಳ್ಳಿ: ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ದುಃಖ ಒಂದು ಕಡೆಯಾದ್ರೆ, ಮೃತನ ಕುಟುಂಬಕ್ಕೆ ಬರಬೇಕಾದ ಭದ್ರತಾ ವಿಮೆ ನೀಡಲು ವಿಮಾ ಕಂಪನಿ ಮೀನಮೇಷ ಮಾಡುತ್ತಿರುವ ಹಿನ್ನೆಲೆ ಹಣಕ್ಕಾಗಿ ನೊಂದ ಕುಟುಂಬ ಪರದಾಟ ನಡೆಸುತ್ತಿದೆ.
ಹಾವೇರಿ ಜಿಲ್ಲೆಯ ಹೂವಿನಶಿಗ್ಲಿ ಗ್ರಾಮದ ಮೌನೇಶಪ್ಪ ಶಂಬಣ್ಣವರ ಎಂಬುವರು ತಮ್ಮ ಮಗ ವೀರಭದ್ರಪ್ಪ ಹೆಸರಿನಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಜೀವ ವಿಮೆ ಮಾಡಿಸಿದ್ದರು. ಸವಣೂರು ತಾಲೂಕಿನ ಯಲುವಿಗಿ ಗ್ರಾಮದಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನಲ್ಲಿ 12 ರೂ. ಜೀವ ವಿಮೆ ಮಾಡಿಸಲಾಗಿತ್ತು. ನಂತರ ಕೆಲ ದಿನಗಳ ಬಳಿಕ ವೀರಭದ್ರಪ್ಪ ಸಾವನ್ನಪ್ಪಿದ್ದಾರೆ. ವೀರಭದ್ರಪ್ಪ ಸಾವಿನ ಎಲ್ಲ ದಾಖಲೆಗಳನ್ನು ಜೀವ ವಿಮಾ ಹಣಕ್ಕಾಗಿ ಯಲುವಿಗಿಯಲ್ಲಿರುವ ಕೆವಿಜಿ ಬ್ಯಾಂಕ್ಗೆ ನೀಡಿದ್ದಾರೆ. ಆದರೆ ಬ್ಯಾಂಕ್ ಅಧಿಕಾರಿಗಳು ವಿಮಾ ಕಂಪನಿಗೆ ಆ ದಾಖಲೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ವಿಮೆ ಹಣ ಬಾರದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಇರುವ ಒಬ್ಬ ಮಗನನ್ನು ಕಳೆದುಕೊಂಡ ನೋವು ಒಂದು ಕಡೆಯಾದರೆ, ಇತ್ತ ಬ್ಯಾಂಕ್ ಅಧಿಕಾರಿಗಳು ವಿಮೆ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಹಾವೇರಿಯಿಂದ ಧಾರವಾಡದ ಪ್ರಮುಖ ಕಚೇರಿಗೆ ನಿತ್ಯ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕುಟುಂಬಸ್ಥರು ಮಾಧ್ಯಮದ ಅಳಲು ತೋಡಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಕೆವಿಜಿ ಬ್ಯಾಂಕ್ನಲ್ಲಿ ವಿಮಾ ಮಾಡಿದ್ರೆ ಕಂಪನಿ ಎರಡು ಲಕ್ಷ ರೂ. ಜೀವ ವಿಮೆ ಹಣ ನೀಡುತ್ತದೆ. ಆದ್ರೆ ಕೆವಿಜಿ ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಸರಿಯಾದ ಸಮಯಕ್ಕೆ ನೀಡದ ಎಡವಟ್ಟಿನಿಂದಾಗಿ ಪರಿಹಾರ ಹಣ ಸಿಗುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಕುಟುಂಬಸ್ಥರ ಸಂಕಷ್ಟಕ್ಕೆ ನೆರವಾಗಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ.