ಹುಬ್ಬಳ್ಳಿ: ಬೈಕ್ ಪಾರ್ಕಿಂಗ್ ವಿಷಯಕ್ಕೆ ಜಗಳವಾಡಿ ಉತ್ತಮ ಬೊಂಗಾಳೆ ಎಂಬುವರನ್ನು ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ, ಇಲ್ಲಿನ ಐದನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹75 ಸಾವಿರ ದಂಡ ವಿಧಿಸಿದೆ.
ಸುನೀಲ ಚಂದಯ್ಯ, ಸನ್ನಿ ಹಾಗೂ ಮೈಕಲ್ ಶಿಕ್ಷೆಗೊಳಗಾದವರು. ಕ್ಲಬ್ ರಸ್ತೆಯ ರೈಲ್ವೆ ಮೈದಾನದ ಪಾರ್ಕಿಂಗ್ ಬಳಿ, 2019ರ ಜನವರಿ 13ರಂದು ಬೈಕ್ ನಿಲ್ಲಿಸುವ ವಿಚಾರಕ್ಕೆ ಅಪರಾಧಿಗಳು ಮತ್ತು ಬೊಂಗಾಳೆ ನಡುವೆ ಜಗಳ ನಡೆದಿತ್ತು. ಆಗ ಮೂವರೂ ಬೊಂಗಾಳೆ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಕೇಶ್ವಾಪುರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್. ಗಂಗಾಧರ ಅವರು ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದರು. ದಂಡದ ಒಟ್ಟು ಮೊತ್ತ ₹2.25 ಲಕ್ಷದ ಪೈಕಿ, ಮೃತರ ಪತ್ನಿಗೆ ₹2 ಲಕ್ಷ ಹಾಗೂ ಉಳಿದ ₹25 ಸಾವಿರವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಬೇಕೆಂದು ಆದೇಶಿಸಿದರು. ಸರ್ಕಾರದ ಪರವಾಗಿ ಸುಮಿತ್ರಾ ಎಂ. ಅಂಚಟಗೇರಿ ಅವರು ವಾದ ಮಂಡಿಸಿದ್ದರು.
ಇದನ್ನು ಓದಿ:ಬೇರೆ ಯುವಕನೊಂದಿಗೆ ಓಡಿ ಹೋಗಿದ್ದ ಮಗನ ಹೆಂಡ್ತಿ.. ಸೊಸೆಯನ್ನು ಕೊಂದು ಠಾಣೆಗೆ ಶರಣಾದ ಮಾವ!