ದಾವಣಗೆರೆ: ತರಕಾರಿ ದರ ಗಗನಕ್ಕೇರಿದ್ದು ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ತರಕಾರಿ ಕೊಳ್ಳುವ ಹಣದಲ್ಲೇ ಚಿಕನ್, ಮಟನ್ ಖರೀದಿಸಬಹುದೆಂದು ಗ್ರಾಹಕರು ಮಾಂಸದಂಗಡಿಗಳತ್ತ ಮುಖ ಮಾಡುತ್ತಿದ್ದಾರೆ ಎಂದು ತರಕಾರಿ ಮಾರಾಟಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಳೆ ಹಾಗು ಹವಾಮಾನ ವೈಪರೀತ್ಯದಿಂದ ವಿವಿಧ ಭಾಗಗಳಿಂದ ದಾವಣಗೆರೆಗೆ ಬರುವ ತರಕಾರಿ ಆಮದಿನಲ್ಲಿ ಗಣನೀಯವಾಗಿ ಇಳಿಕೆ ಕಂಡ ಬೆನ್ನಲ್ಲೇ ಪ್ರತಿಯೊಂದು ತರಕಾರಿ ಬೆಲೆ ವಿಪರೀತ ಹೆಚ್ಚಾಗಿದೆ. ಇದರಿಂದ ಗ್ರಾಹಕರಿಗೆ ಮಾತ್ರವಲ್ಲ, ತರಕಾರಿ ಮಾರಾಟಗಾರರಲ್ಲಿಯೂ ಆತಂಕ ಮನೆ ಮಾಡಿದೆ.
ಚಿತ್ರದುರ್ಗ, ಹಾಸನ, ಕೋಲಾರ, ಬೇಲೂರು, ಹಳೇಬೀಡು, ಬೆಳಗಾವಿ ಹಾಗೂ ಪಕ್ಕದ ರಾಜ್ಯ ತಮಿಳುನಾಡಿನಿಂದ ದಾವಣಗೆರೆಗೆ ಸಾಕಷ್ಟು ತರಕಾರಿ ಆಮದಾಗುತ್ತಿತ್ತು. ಅದ್ರೆ ಜಡಿ ಮಳೆ ಹಾಗೂ ಹವಾಮಾನ ವೈಪರೀತ್ಯಗಳಿಂದ ಆಮದು ಕಡಿಮೆಯಾಗಿದ್ದು, ದರ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ದಾವಣಗೆರೆಯ ತರಕಾರಿ ದರ:
ಟೊಮೆಟೊ ಕೆ.ಜಿಗೆ 60 ರಿಂದ 50 ರೂಪಾಯಿ ಇದೆ, ನುಗ್ಗೆಕಾಯಿ ಕೆ.ಜಿಗೆ 200 ರಿಂದ 400 ರೂಪಾಯಿ, ದೊಣ್ಣೆ ಮೆಣಸಿನಕಾಯಿ- 300 ರೂ, ಬೀನ್ಸ್ ಹಾಗು ಕ್ಯಾರೆಟ್ -100, ಮೆಣಸಿನಕಾಯಿ - 70, ಅಲೂಗಡ್ಡೆ - 50 ರೂ, ಸೊಪ್ಪು ಒಂದು ಕಟ್ಟಿಗೆ 10 ರಿಂದ 15 ರೂ, ಬದನೆಕಾಯಿ - 60 ರೂ, ಮೂಲಂಗಿ - 60 ರೂ, ಬಟಾಣಿ - 90 ರೂ, ಬೀಟ್ರೂಟ್ - 70 ರೂ ಇದ್ದು, ನವೀಲು ಕೋಸು ಹಾಗು ಹೂ ಕೋಸಿಗೆ ಹೆಚ್ಚು ಡಿಮ್ಯಾಂಡ್ ಇರುವುದರಿಂದ ಜನರು ಈ ದರದಲ್ಲಿ ಮಟನ್, ಚಿಕನ್ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ತರಕಾರಿ ಮಾರಾಟಗಾರರಿಗೆ ದಿಕ್ಕು ತೋಚದಂತಾಗಿದೆ.