ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ನಾಳೆ ಸಿಎಂ ಯಡಿಯೂರಪ್ಪ ಆಗಮಿಸುವುದು ಬಹುತೇಕ ಖಚಿತ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಿಳಿಸಿದರು.
ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ನೀಡಬೇಕೆಂಬುದು ಶ್ರೀಗಳ ಬಲವಾದ ಬೇಡಿಕೆ. ಈ ವಿಚಾರ ಕಾರ್ಯಕ್ರಮದಲ್ಲಿ ನಾಳೆ ಮುನ್ನೆಲೆಗೆ ಬರಲಿದೆ. ಈಗಾಗಲೇ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯಾದಂತ ಪಾದಯಾತ್ರೆ ನಡೆಸುವ ಮೂಲಕ ಗಮನ ಸೆಳೆದಿದ್ದರು. ಇಂದು ಆರೋಗ್ಯ ಸಚಿವ ಶ್ರೀರಾಮುಲು ಸಹ ಜಾತ್ರೆಗೆ ಆಗಮಿಸಿದ್ದರು.
ಈ ಹಿಂದೆ ಹರಿಹರದ ಪಂಚಮಸಾಲಿ ಸಮಾಜದ ಪೀಠಾಧಿಪತಿ ವಚನಾನಂದ ಶ್ರೀಗಳು ವೇದಿಕೆ ಮೇಲೆಯೇ ಯಡಿಯೂರಪ್ಪನವರಿಗೆ ನೀವು ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡದಿದ್ದರೆ ಪಂಚಮಸಾಲಿ ಸಮಾಜ ನಿಮ್ಮನ್ನು ಕೈಬಿಡುತ್ತೆ ಎಂದು ಹೇಳಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಇದಕ್ಕೆ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೆ ವಾಲ್ಮೀಕಿ ಜಾತ್ರೆಗೆ ಸಿಎಂ ಆಗಮಿಸುತ್ತಿದ್ದು, ಎಚ್ಚರಿಕೆಯ ನಡೆಯನ್ನು ಯಡಿಯೂರಪ್ಪ ಇಡಲಿದ್ದಾರೆ ಎನ್ನಲಾಗುತ್ತಿದೆ.
ವಾಲ್ಮೀಕಿ ಜಾತ್ರೆ ಕುರಿತು ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ವಾಲ್ಮೀಕಿ ಜಾತ್ರೆಯಲ್ಲಿ ಈ ಹಿಂದೆ ಆದ ಅಚಾತುರ್ಯ ನಡೆಯುವುದಿಲ್ಲ ಎಂಬ ವಿಶ್ವಾಸ ಇದೆ. ಶ್ರೀಗಳು ಅಭಿಪ್ರಾಯ ಮಂಡಿಸುವುದರಲ್ಲಿ ತಪ್ಪೇನಿಲ್ಲ. ಈಗಾಗಲೇ ವಾಲ್ಮೀಕಿ ಶ್ರೀಗಳು ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದಾರೆ ಎಂದು ತಿಳಿಸಿದರು.