ದಾವಣಗೆರೆ: ಈಡಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಶರಣ ಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಡಿಗ ಸಮಾಜದಿಂದ 7 ಜನ ಶಾಸಕರಾಗಿ ಆಯ್ಕೆಯಾಗಿದ್ದು, ಸರ್ಕಾರ ರಚನೆಯಲ್ಲಿ ಈಡಿಗ ಸಮಾಜದ ಪಾತ್ರ ಹೆಚ್ಚಿದೆ. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರನ್ನು ಎಂಎಲ್ಸಿ ಮಾಡಿ, ಸಚಿವರನ್ನಾಗಿ ಮಾಡುತ್ತೇವೆ ಎಂದು ಎಂಪಿ ಚುನಾವಣೆಯ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪನವರು ಮಾತು ಕೊಟ್ಟಿದ್ದರು. ಹಾಗಾಗಿ, ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.
ಬಿಜೆಪಿ ಸರ್ಕಾರ ಎಲ್ಲಾ ಚಿಕ್ಕಪುಟ್ಟ ಸಮುದಾಯಕ್ಕೆ ನಿಗಮ ಮಂಡಳಿ ಮಾಡಿದೆ. ಅದರೆ ಈಡಿಗ ಸಮಾಜಕ್ಕೆ ನಿಗಮ ಮಂಡಳಿ ಮಾಡಿಲ್ಲ, ತಕ್ಷಣ ನಿಗಮ ಮಂಡಳಿ ಮಾಡಲಿ. ಹೆಂಡ ಮಾರುವುದು ಈಡಿಗ ಸಮಾಜದ ಕುಲ ಕಸುಬಾಗಿತ್ತು. ಅದನ್ನು ಕೂಡ ಸರ್ಕಾರ ರದ್ದು ಮಾಡಿ ಕುಲ ಕಸುಬು ಸಹ ಇಲ್ಲದಂತೆ ಮಾಡಿದೆ. ಬಂಗಾರಪ್ಪನವರ ಸರ್ಕಾರ ಹೆಂಡ ಮಾರಾಟ ಮಾಡುವುದು ಹಾಗೂ ಈಚಲು ಮರದಿಂದ ಹೆಂಡ ಇಳಿಸಲು ಪರವಾನಿಗೆ ನೀಡಿದ್ದರು. ನಮ್ಮ ಸಮುದಾಯಕ್ಕೆ ನಿಗಮ ಮಂಡಳಿ ಮಾಡಿ ಎಂದು ಸಿಎಂಗೆ ಸ್ವಾಮೀಜಿ ಒತ್ತಾಯಿಸಿದರು.