ದಾವಣಗೆರೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಸಭಾಧ್ಯಕ್ಷರ ಸ್ಥಾನಕ್ಕೆ ಅಗೌರವ ತೋರುತ್ತಿದ್ದಾರೆ. ಕೂಡಲೇ ಅವರು ಸಭಾಧ್ಯಕ್ಷರ ಕ್ಷಮೆಯಾಚಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ರಮೇಶ್ ಕುಮಾರ್ ಸಭಾಧ್ಯಕ್ಷರಾಗಿದ್ದಾಗ ಒಬ್ಬರನ್ನೊಬ್ಬರು ಹೊಗಳುತ್ತಿದ್ದರು. ರಮೇಶ್ ಕುಮಾರ್‌ರನ್ನು ಅಂಬೇಡ್ಕರ್ ಎಂದು, ಸಿದ್ದರಾಮಯ್ಯರನ್ನು ದೇವರಾಜ್ ಅರಸ್ ಎಂದು ಒಬ್ಬರನ್ನೊಬ್ಬರು ಹೊಗಳಿಕೊಳ್ಳುತ್ತಿದ್ದರು. ಆದ್ರೆ, ಈಗ ಸಭಾಧ್ಯಕ್ಷರನ್ನ ಏಕವಚನದಲ್ಲಿ ಕರೆಯುತ್ತಾರೆ. ಸಂವಿಧಾನದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಆದರೆ ಅವರಿಗೆ ಸಭಾಧ್ಯಕ್ಷರಿಗೆ ಯಾವ ರೀತಿ ಗೌರವ ಕೊಡಬೇಕು ಎನ್ನುವುದು ಗೊತ್ತಿಲ್ವಾ? ಈ ಕುರಿತು ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ ಎಂದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರವನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ. ನೋವಿನಲ್ಲಿರುವ ಶಿವಕುಮಾರ್ಗೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ. ಕುಟುಂಬದವರು ಕಣ್ಣೀರು ಹಾಕುತ್ತಿರುವುದು ಮಾಧ್ಯಮಗಳಲ್ಲಿ ನೋಡಿದ್ದೇವೆ ಎಂದು ಹೇಳಿದರು.