ಬೆಂಗಳೂರು : ವಿಯೆಟ್ನಾಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆ-ಪ್ಯಾನ್ ಕಾಂಟಿನೆಂಟಲ್ ಇಂಟರ್ ನ್ಯಾಷನಲ್ 2022ನಲ್ಲಿ ಭಾರತದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಾಳು ರಾಮು ಆಗಿದ್ದು, ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ (ದ್ವಿತೀಯ ಸ್ಥಾನ) ಹೊರ ಹೊಮ್ಮಿದ್ದಾರೆ. ಈ ಮೂಲಕ ವಿದೇಶದಲ್ಲಿ ಭಾರತದ, ಬೆಂಗಳೂರಿನ ಕೀರ್ತಿ ಹೆಚ್ಚಿಸಿದ್ದಾರೆ.
ಏಪ್ರಿಲ್ 3ರಿಂದ 10ರವರೆಗೆ ಈ ಸ್ಪರ್ಧೆ ನಡೆದಿದ್ದು, ಒಟ್ಟು 14 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಸ್ಥಾನವನ್ನು ಫಿಲಿಪ್ಪೀನ್ಸ್ ಪಡೆದರೆ, ದ್ವಿತೀಯ ಸ್ಥಾನವನ್ನು ಭಾರತ ಅಲಂಕರಿಸಿತು. ಭಾರತದಿಂದ ಪ್ರತಿನಿಧಿಸಿದ್ದ ರಾಮು ರಾಜಧಾನಿ ಬೆಂಗಳೂರಿನ ವೈಯಾಲಿಕಾವಲ್ನವರು ಎನ್ನುವುದು ಹೆಮ್ಮೆಯ ವಿಚಾರ. ರಾಮುವಿನ ಈ ಸಾಧನೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ ಮಂಜುನಾಥ್ ಶ್ಲಾಘಿಸಿ, ಶುಭ ಹಾರೈಸಿದ್ದಾರೆ. ಕ್ಷೇತ್ರದ ಶಾಸಕ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ಕೂಡ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಗನ್‌ಮ್ಯಾನ್ ಅಕ್ರಮ ನೇಮಕಾತಿ ಬಗ್ಗೆ ನನಗೇನು ಗೊತ್ತಿಲ್ಲ: ಶಾಸಕ ಎಂ.ವೈ ಪಾಟೀಲ್
ಈ ಕುರಿತು ರಾಮು ಮಾತನಾಡಿದ್ದು, ಸತತ ಮೂರು ವರ್ಷಗಳಿಂದ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ. ಟಾಪ್ 5ಕ್ಕೆ ತೃಪ್ತಿ ಪಟ್ಟಿದ್ದೆ. ಕಳೆದ ವರ್ಷ ವಿನ್ನರ್ ಆಗಿ, ಮಿಸ್ಟರ್ ಪ್ಯಾನ್ ಕಾಂಟಿನೆಂಟಲ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಆಯ್ಕೆಯಾಗಿದ್ದೆ.
ಇಲ್ಲಿ ದ್ವಿತೀಯ ಸ್ಥಾನ ಬಂದಿರುವುದು ಖುಷಿ ಕೊಟ್ಟಿದೆ. ಅದಕ್ಕಿಂತ ಮಿಗಿಲಾಗಿ ಭಾರತದಿಂದ ಸ್ಪರ್ಧೆ ಮಾಡಬೇಕು ಎಂಬ ಕನಸು ನನಸಾಗಿದೆ. ವಿದೇಶದಲ್ಲಿ ಭಾರತೀಯರಿಗೆ ಕೊಡುವ ಗೌರವ, ಪ್ರೀತಿ ಕಂಡು ಅತೀವ ಸಂತಸವಾಗಿದೆ. ಇಷ್ಟು ದಿನ ನನಗೆ ಬೆಂಬಲಿಸಿ, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.