ದಾವಣಗೆರೆ: ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ದಾವಣಗೆರೆಯ ಅಕ್ಕಪಕ್ಕದಲ್ಲಿರುವ ನಾಗರಕಟ್ಟೆ, ಕಾಡಜ್ಜಿ ಗ್ರಾಮಗಳಲ್ಲಿನ ಭತ್ತದ ಗದ್ದೆ ಹಾಗೂ ಅಡಿಕೆ ತೋಟ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ರೈತರಿಗೆ ಆತಂಕ ಮನೆಮಾಡಿದೆ.
ಧಾರಾಕಾರ ಮಳೆಗೆ ಕೆಇಬಿ ಸಬ್ಸ್ಟೇಷನ್, ಕೃಷಿ ಕೇಂದ್ರಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಬಹುತೇಕ ಜಮೀನು ಜಲಾವೃತವಾಗಿದ್ದು, ಕಾಡಜ್ಜಿ ಗ್ರಾಮದಲ್ಲಿ ನೂರಾರು ಎಕರೆ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳಿಗೆ ನೀರು ನುಗ್ಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚರಂಡಿ ನೀರು ಜಮೀನಿಗೆ ನುಗ್ಗಿದೆ ಎಂದು ರೈತರು ಆರೋಪಿಸಿದ್ದಾರೆ.
ಕೃಷಿ ತರಬೇತಿ ಕೇಂದ್ರ ಕೂಡ ಜಲಾವೃತವಾಗಿದ್ದು, ದಾಖಲೆಗಳು ಹಾನಿಯಾಗಿವೆ. ತಗ್ಗು ಪ್ರದೇಶಗಳಲ್ಲಿ ಕೃಷಿ ತರಬೇತಿ ಕೇಂದ್ರ ಹಾಗೂ ಕೆಇಬಿ ಸಬ್ಸ್ಟೇಷನ್ ನಿರ್ಮಾಣ ಮಾಡಿರುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.