ದಾವಣಗೆರೆ: ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ನಿಮ್ಮ ಅಕ್ಕ ಗೌರಿ ಲಂಕೇಶ್ ಡ್ರಗ್ಸ್ ಅಡಿಕ್ಟ್ ಹೌದೋ, ಅಲ್ಲವೋ ಅಂತಾ ಮೊದಲು ಹೇಳಿ. ಎಲ್ಲಿ ಡ್ರಗ್ಸ್ ಸೇವನೆ ಮಾಡ್ತಿದ್ದರು ಎಂಬುದನ್ನು ನಾನು ತೋರಿಸ್ತೇನೆ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆಯಲ್ಲಿ ಶ್ರೀರಾಮ ಸೇನೆ ಪಾತ್ರವಿಲ್ಲ, ನನ್ನ ಪಾತ್ರವೂ ಇಲ್ಲ. ಈಗಾಗಲೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ನಮ್ಮ ಮೇಲೆ ವಿನಾಕಾರಣ ಆರೋಪ ಮಾಡಬೇಡಿ. ನನ್ನ ಅಕ್ಕನನ್ನು ಕೊಲೆ ಮಾಡಿದವರು ಡ್ರಗ್ಸ್ ಅಡಿಕ್ಟ್ ಆಗಿದ್ದರು ಎಂದು ಹೇಳಿರುವ ಇಂದ್ರಜಿತ್ ಲಂಕೇಶ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ನಾಲ್ಕು ನಟಿಯರ ಮೇಲೆ ಆರೋಪ ಮಾಡಿದರೆ ಸಾಲದು, ನಿಮ್ಮ ನಡವಳಿಕೆಗೆ ಜನರು ಛೀ... ಥೂ... ಎನ್ನುತ್ತಿದ್ದಾರೆ. ಡ್ರಗ್ಸ್ ಜಾಲದಲ್ಲಿದ್ದವರ ಹೆಸರು ಯಾಕೆ ಬಹಿರಂಗಪಡಿಸಿಲ್ಲ ಎಂದು ಟಾಂಗ್ ನೀಡಿದರು.
ರಾಕೇಶ್ ಸಿದ್ದರಾಮಯ್ಯ ಡ್ರಗ್ಸ್ ನಿಂದಲೇ ಸತ್ತದ್ದು...!
ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಡ್ರಗ್ಸ್ ನಿಂದಲೇ ಸಾವನ್ನಪ್ಪಿದ್ದು ಎಂದು ಜಗಜ್ಜಾಹೀರಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಕೇಶ್ ಮೃತಪಟ್ಟರೂ ಯಾಕೆ ಡ್ರಗ್ಸ್ ಜಾಲ ಭೇದಿಸಲು ಕಠಿಣ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಡ್ರಗ್ಸ್ ಜಾಲದವರೇ ನಮ್ಮ ಸರ್ಕಾರ ಕೆಡವಿದ್ದು ಎಂಬ ಆರೋಪ ಮಾಡಿದ್ದಾರೆ. ಕೂಡಲೇ ಕುಮಾರಸ್ವಾಮಿ ಅವರನ್ನು ಇಂದ್ರಜಿತ್ ಲಂಕೇಶ್ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಬೇಕು. ಈ ಜಾಲದಲ್ಲಿ ಯಾರೇ ಇದ್ದರೂ ಹೊರಗೆಳೆಯಬೇಕು ಎಂದು ಆಗ್ರಹಿಸಿದರು.