ದಾವಣಗೆರೆ: ಕೊರೊನಾ ಹಾವಳಿಯಿಂದ ಕಂಗಾಲಾಗಿರುವ ರೈತರಿಗೆ ಮತ್ತೊಂದು ಸಂಕಷ್ಟ ಬಂದೊದಗಿದೆ. ಮಾರಾಟಗಾರ ನೀಡಿದ್ದ ಬಿತ್ತನೆ ಬೀಜವನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಬರಡಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆ ತಾಲೂಕಿನ ಸಿದ್ದನೂರು ಗ್ರಾಮದ ರೈತ ಪ್ರಕಾಶ್, ದಾವಣಗೆರೆಯ ನರಸರಾಜ ಪೇಟೆಯಲ್ಲಿರುವ ನಿರ್ಮಲ ಆಗ್ರೋ ಏಜೆನ್ಸಿಯಿಂದ ಹೂಕೋಸು ಬೀಜ ಖರೀದಿಸಿ ತನ್ನ ಒಂದು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಆದ್ರೀಗ ಅದು ಚಿಕ್ಳು ಒಡೆದಿದ್ದು, ಗೆಡ್ಡೆ ಇಲ್ಲದೆ ಬರೀ ಹೂವು ಬೆಳೆದಿದೆ. 40 ರಿಂದ 50 ಸಾವಿರ ಖರ್ಚು ಮಾಡಿದ್ದ ಬೆಳೆ ಸಂಪುರ್ಣವಾಗಿ ಚಿಕ್ಳು ಒಡೆದಿದ್ದು, ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಇದರಿಂದ ಆಕ್ರೋಶಗೊಂಡ ರೈತ ಪ್ರಕಾಶ್ ಹಾಗೂ ರೈತ ಸಂಘದ ರೈತರು ಪರಿಹಾರ ನೀಡುವಂತೆ ಬಿತ್ತನೆ ಬೀಜದಂಗಡಿಯ ಮುಂದೆ ಆಗ್ರಹಿಸಿದರು.
ಆದರೆ, ಬೆಳೆ ಚಿಕ್ಳು ಒಡೆಯಲು ಕಳಪೆ ಬೀಜ ಕಾರಣವಲ್ಲ. ಬೆಳೆಗೆ ಸರಿಯಾಗಿ ಔಷಧಿ ಸಿಂಪಡಣೆ ಮಾಡದಿರುವ ಕಾರಣ ಈ ರೀತಿಯಾಗಿದೆ. ಬೆಳೆ ನಷ್ಟ ಹೊಂದಿರುವ ಬಗ್ಗೆ ರೈತರು ಮೊದಲು ಕೃಷಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಗಮನಕ್ಕೆ ತರಬೇಕು. ಕೃಷಿ ಅಧಿಕಾರಿಗಳು ಜಮೀನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆಂಬುದು ಬೀಜದಂಗಡಿಯ ಮಾಲೀಕರ ವಾದ.
ಒಟ್ಟಾರೆ, ರೈತನ ಕೃಷಿಯ ಬದುಕು ಹೂವಿನ ದಾರಿಯಲ್ಲ. ಅದು ನಿಜಕ್ಕೂ ಕಷ್ಟದ ಕವಲು ದಾರಿಯಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದರೂ, ಬೆಳೆ ಕೈಗೆ ಬರುವ ಮುನ್ನ ಸಾಕಷ್ಟು ಸವಾಲುಗಳು ರೈತನಿಗೆ ಎದುರಾಗುತ್ತಿವೆ. ಇದೀಗ ಬಿತ್ತಿದ ಬೀಜ ಹುಸಿಯಾಗಿದ್ದರಿಂದ ರೈತ ಪ್ರಕಾಶ್ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ‘ವೆಜ್ ಮಟನ್’: ನಾನ್ವೆಜ್ ರುಚಿ ನೀಡುವ ಜಾರ್ಖಂಡ್ನ ವಿಶೇಷ ಅಣಬೆ