ದಾವಣಗೆರೆ: ಸೆಲ್ಫಿಯಿಂದ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿರುವ ಸುದ್ದಿ ಕೇಳಿದ್ದೇವೆ, ಆದ್ರೆ ಅದೇ ಸೆಲ್ಫಿಯಿಂದ ಇಲ್ಲೋಬ್ಬ ವೃದ್ದನ ಪ್ರಾಣ ರಕ್ಷಣೆಯಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ತುಂಗಾಭದ್ರ ಹೊಳೆ ಬಳಿ ಕಂಡು ಬಂದಿದೆ.
ತುಂಗಾಭದ್ರ ಹೊಳೆಯಲ್ಲಿ ವೃದ್ಧನೋರ್ವ ಆತ್ಮಹತ್ಯೆಗೆ ಯತ್ನಿಸುತ್ತಿದ್ದ. ಇದೇ ವೇಳೆ ನದಿ ವೀಕ್ಷಣೆಗೆ ಬಂದಿದ್ದ ಯುವಕ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ವೃದ್ದ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಸೆಲ್ಫಿಯಲ್ಲಿ ಕಾಣಿಸಿದೆ. ತಿರುಗಿ ನೋಡುವಷ್ಟರಲ್ಲಿ ಇನ್ನೇನು ವೃದ್ದ ನದಿಗೆ ಹಾರಬೇಕು ಎನ್ನುವಷ್ಟರಲ್ಲಿ ಸೆಲ್ಫಿ ತೆಗೆಯುತ್ತಿದ್ದ ಯುವಕ ಹಾಗೂ ಅಲ್ಲಿದ್ದ ಯುವಕರು ಕೂಗಿ, ಸಾರ್ವಜನಿಕರ ಸಹಾಯದಿಂದ ವೃದ್ದನನ್ನು ಕಾಪಾಡಿದ್ದಾರೆ.
ಇನ್ನು ತುಂಗಾಭದ್ರಾ ನದಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಯುತ್ತಿದ್ದು, ಕೂದಲೆಳೆಯ ಅಂತರದಲ್ಲಿ ವೃದ್ದ ಪಾರಾಗಿದ್ದಾನೆ. ಈ ಕುರಿತಂತೆ ಹರಿಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವೃದ್ದ ಯಾರು ಎಂದು ಗುರುತು ಸಿಕ್ಕಿಲ್ಲ.