ದಾವಣಗೆರೆ: ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ನಡೆಸುವ ಹೋರಾಟದ ಕುರಿತು ಪೂರ್ವಭಾವಿ ಸಭೆಯನ್ನು ಕುರುಬ ವಿದ್ಯಾವರ್ಧಕ ಸಂಘದಿಂದ ಇಂದು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಬೀರೇಶ್ವರ ಭವನಲ್ಲಿ ನಡೆದ ಸಭೆಯಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಬಗ್ಗೆ ರೂಪರೇಷೆಗಳನ್ನು ಹಾಕಿಕೊಳ್ಳಲಾಯಿತು. ಸಭೆಯಲ್ಲಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀ ಹಾಗು ಹೊಸದುರ್ಗ ಶಾಖ ಮಠದ ಈಶ್ವರಾನಂದಪುರಿ ಶ್ರೀ ಭಾಗಿಯಾಗಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿದರು.
ಕುರುಬರನ್ನು ಎಸ್ಟಿಗೆ ಸೇರಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಕುರುಬ ಸಮಾಜದಿಂದ ಎಸ್ಟಿ ಮೀಸಲಾತಿಗಾಗಿ 24 ದಿನಗಳ ಕಾಲ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಜನವರಿ 15 ರಿಂದ ಮೀಸಲಾತಿಗಾಗಿ ಪಾದಯಾತ್ರೆ ಆರಂಭವಾಗಿ, ಫೆ 07 ರಂದು ಪಾದಯಾತ್ರೆ ಮುಕ್ತಾಯವಾಗಲಿದೆ. ಫೆ 07 ಕ್ಕೆ ಬೆಂಗಳೂರಿನಲ್ಲಿ ಎಸ್ಟಿ ಮೀಸಲಾತಿ ಕುರಿತು ರಾಜ್ಯ ಮಟ್ಟದ ಬೃಹತ್ ಸಮಾವೇಶ ಕೂಡ ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ 10 ಲಕ್ಷ ಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ ಇದೆ. ಕಾಗಿನೆಲೆಯಿಂದ ಬೆಂಗಳೂರಿಗೆ ಸುಮಾರು 340 ಕಿ.ಮೀ. ಪಾದಯಾತ್ರೆ ಮಾಡುವುದಾಗಿ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು ನಿರ್ಧರಿಸಿದ್ದು, ಸಮಾಜದ ಮುಖಂಡರು ಶ್ರೀಯವರಿಗೆ ಸಾಥ್ ನೀಡಲಿದ್ದಾರೆ.