ದಾವಣಗೆರೆ: ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಸಿಎಂ ಆಗುವ ಕನಸು ಕಾಣುವುದರಲ್ಲಿ ತಪ್ಪೇನಿಲ್ಲ, ಆದ್ರೆ ಈಡೇರಬೇಕಲ್ವಾ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಈ ವಿಚಾರವಾಗಿ ನಾನು ಕತ್ತಿಗೆ ಟಾಂಗ್ ನೀಡಲು ಹೋಗುವುದಿಲ್ಲ. ನಾನು ಏನೇ ಮಾತನಾಡಿದರು ವಿವಾದ ಆಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ನಾನು ಹಾಗೂ ಲಕ್ಷ್ಮಣ ಸವದಿ ಆತ್ಮೀಯ ಸ್ನೇಹಿತರು. ಒಂದು ಗಂಟೆಗಳ ಕಾಲ ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದೇನೆ. ಅಭ್ಯರ್ಥಿ ಸೋಲಿಸುವ ಕೀಳು ರಾಜಕೀಯ ಮಾಡಲು ಹೋಗುವುದಿಲ್ಲ. ಪಕ್ಷದ ಅಭ್ಯರ್ಥಿ ಸೋಲಿಸಿದರೆ ತಾಯಿಗೆ ಮೋಸ ಮಾಡಿದಂತೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದರು.
ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭೇಟಿ ರಾಜಕೀಯ ಉದ್ದೇಶದಿಂದ ಮಾಡಿಲ್ಲ, ಈ ಬಗ್ಗೆ ಚರ್ಚೆ ಕೂಡ ಮಾಡಿಲ್ಲ. ಆದರೆ ಮಾಧ್ಯಮಗಳಲ್ಲಿ ಏನೇನೋ ಸುದ್ದಿ ಬಂದಿದೆ. ಇದು ಸತ್ಯಕ್ಕೆ ದೂರವಾದದ್ದು. ಹೊನ್ನಾಳಿಯಲ್ಲಿ ಮುಂದಿನ ತಿಂಗಳು ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಬರುವಂತೆ ಮನವಿ ಮಾಡಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಿದ್ದೇನೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರಿಂದ ಸಿಎಂ ಯಡಿಯೂರಪ್ಪ ಟೆನ್ಶನ್ ಆಗಿಲ್ಲ. ನಾಲ್ಕು ಬಾರಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ರಾಜಕೀಯದಲ್ಲಿ ಅಪಾರ ಅನುಭವವಿದೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಅವರಲ್ಲಿದೆ. ತಾಳ್ಮೆಯಿಂದ ಎಲ್ಲವನ್ನೂ ಯಡಿಯೂರಪ್ಪ ಬಗೆಹರಿಸುತ್ತಾರೆ. ನಾನು ಇನ್ನೂ ರಾಜಕೀಯದಲ್ಲಿ ಚಿಕ್ಕವನು ಎಂದು ರೇಣುಕಾಚಾರ್ಯ ಹೇಳಿದರು.