ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಾಗಡಿ ಗ್ರಾಮದಲ್ಲಿರುವ ಏಕೈಕ ಸರ್ಕಾರಿ ಶಾಲೆಯ (Magadi Government School) ಪರಿಸ್ಥಿತಿ ಅಯೋಮಯವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡಬೇಕಾದ ವಾತಾವರಣ ಇಲ್ಲಿದೆ.
ಶಾಲೆ ನಿರ್ಮಾಣವಾಗಿ 75 ವರ್ಷಗಳು ಉರುಳಿವೆ. ಆದ್ರೆ ಶಾಲೆಯಲ್ಲಿ ಚಿಕ್ಕ ಮಕ್ಕಳು ಜೀವ ಭಯದಲ್ಲೇ ಪಾಠ ಕೇಳುತ್ತಿದ್ದಾರೆ. ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತ ತಲುಪಿವೆ. ಶಾಲೆಗೆ ಎಪ್ಪತ್ತೈದು ವರ್ಷಗಳ ಹಿಂದೆ ಬಳಿದ ಬಣ್ಣ ಬಿಟ್ಟರೆ, ಹೊಸದಾಗಿ ಬಣ್ಣ ಬಳಿದಿಲ್ಲ. ಶಾಲೆಯ ಕೊಠಡಿಗಳನ್ನು ತಲೆ ಎತ್ತಿ ನೋಡಿದ್ರೆ ಆಕಾಶ ಕಾಣುವ ದುಸ್ಥಿತಿ. ಮಕ್ಕಳಿಗೆ ಪಾಠ ಮಾಡಲು ಇಬ್ಬರೇ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಸೂಕ್ತ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಮಳೆ ಬಂದ್ರೆ ಸಾಕು ಸೋರುವ ಪರಿಸ್ಥಿತಿಯಿದ್ದು, ಅನಿವಾರ್ಯವಾಗಿ ಶಾಲೆಗೆ ರಜೆ ಕೊಡುವುದು ಸಾಮಾನ್ಯವಾಗಿಬಿಟ್ಟಿದೆ.
ಪೋಷಕರು ಹೇಳುವುದೇನು?:
ಶಾಲೆಯ ದುಸ್ಥಿತಿ ನೋಡಿದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಮಾಗಡಿ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲವಂತೆ. ಸುಣ್ಣ ಬಣ್ಣ ಬಳಿದು ಶಾಲೆಯನ್ನು ಸ್ವಚ್ಛವಾಗಿಸುವಂತೆ ಬಿಇಒ, ಅಧಿಕಾರಿಗಳಿಗೆ ಕೇಳಿಕೊಂಡರೂ ಕೂಡ ನಮಗೂ ಶಾಲೆಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರೇ, ಕಾಂಗ್ರೆಸ್‌ನ ನರಿ ಬುದ್ಧಿಯ ಬಗ್ಗೆ ಇನ್ನೊಮ್ಮೆ ಯೋಚಿಸಿ.. ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ
ಇದೇ ರೀತಿ ಅಧಿಕಾರಿಗಳು ವರ್ತಿಸಿದ್ರೆ ಇಡೀ ಶಾಲೆಗೆ ಬೀಗ ಜಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 148 ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಒದಗಿಸಬೇಕಾಗಿದೆ.