ದಾವಣಗೆರೆ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇಂದೂ ಕೂಡ ಮುಂದುವರೆದಿದೆ. ದಾವಣಗೆರೆಯ ನಗರದ ಬಿಎಸ್ಸಿ ಕಾಲೇಜು ಮುಂಭಾಗ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ಹಿಜಾಬ್ ಧರಿಸಿದ ಬಂದ ವಿದ್ಯಾರ್ಥಿನಿಯರನ್ನು ಹೊರ ಕಳುಹಿಸಿ ಎಂದ ಪಟ್ಟು ಹಿಡಿದ ಬೆನ್ನಲ್ಲೇ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಮನವೊಲಿಸಿದ್ದಾರೆ.
ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿದ ಪ್ರಾಂಶುಪಾಲರಾದ ಎಂ.ಸಿ.ಗುರು ಕೋರ್ಟ್ ತೀರ್ಪು ಬರುವವರೆಗೂ ನಾವು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಕೂಡಲೇ ಎಲ್ಲಾ ವಿದ್ಯಾರ್ಥಿಗಳು ಶಾಲು ತೆಗೆದು ತರಗತಿಗಳಿಗೆ ತೆರಳುವಂತೆ ಸೂಚಿಸಿದ್ದಾರೆ.
ಪ್ರಾಂಶುಪಾಲರ ಮನವಿ ಮೇರೆಗೆ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ತರಗತಿಗೆ ಹಾಜರಾದರು. ಬಳಿಕ ಹಿಜಾಬ್ ತೆಗೆದು ತರಗತಿಗಳಿಗೆ ಹೋಗುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರಿಂದ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಮತ್ತೆ ಮನವೊಲಿಸಿದ ಪ್ರಾಂಶುಪಾಲರು ಮತ್ತೆ ಕೇಸರಿ ಶಾಲು ತೆಗೆದು ತರಗತಿಗಳಿಗೆ ಹೋಗುವಂತೆ ಮನವಿ ಮಾಡಿದ ಬಳಿಕ ವಿದ್ಯಾರ್ಥಿಗಳು ತರಗತಿಗೆ ತೆರಳಿದರು.
ಹೊನ್ನಾಳಿ ಸರ್ಕಾರಿ ಕಾಲೇಜ್ ನಲ್ಲಿ ವಿದ್ಯಾರ್ಥಿಗಳನ್ನು ಹೊರಗೆ ಕೂರಿಸಿದ ಪ್ರಾಂಶುಪಾಲರು
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೂಡ ಪ್ರತಿಭಟನೆ ಆರಂಭವಾಗಿದೆ. ಹಿಜಾಬ್ ಧರಿಸಿದ ಹೆಣ್ಣುಮಕ್ಕಳನ್ನು ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜ್ ಪ್ರವೇಶ ನಿರ್ಬಂಧ ಹೇರಲಾಗಿದ್ದು, ವಿದ್ಯಾರ್ಥಿಗಳನ್ನು ಉಪನ್ಯಾಸಕರು ಕಾಲೇಜಿನ ಹೊರಗೆ ಕೂರಿಸಿದ ಪ್ರಸಂಗ ನಡೆದಿದೆ. ಶಾಲು ಹಾಗೂ ಹಿಜಾಬ್ ತೆಗೆದು ಬನ್ನಿ ಎಂದು ಪ್ರಾಂಶುಪಾಲರು ಹೇಳಿದರೂ, ಹಠ ಹಿಡಿದ ವಿದ್ಯಾರ್ಥಿಗಳು ಹೊರಗೆ ನಿಂತರು. ಸರ್ಕಾರದ ಅದೇಶ ಹಾಗೂ ಕೋರ್ಟ್ನ ಅದೇಶ ಬರುವರೆಗೂ ಕಾಯುವಂತೆ ಪ್ರಾಂಶುಪಾಲರು ಮನವಿ ಮಾಡಿಕೊಂಡರು.