ಹರಿಹರ: ನಗರದ ಹೊರವಲಯದಲ್ಲಿನ ಗಂಗಾನಗರ ಮತ್ತು ಕೊಳಚೆ ಪ್ರದೇಶದಲ್ಲಿ ಹಸಿವಿನಿಂದಿರುವ ಸಾರ್ವಜನಿಕರಿಗೆ ಬಿಜೆಪಿ ಕಾರ್ಯಕರ್ತರಿಂದ ಊಟದ ವ್ಯವಸ್ಥೆ ಮಾಡಲಾಯಿತು.
ಊಟದ ವ್ಯವಸ್ಥೆಗೆ ಚಾಲನೆ ನೀಡಿದ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ದೇಶದಲ್ಲಿ ಹಾಗೂ ವಿಶ್ವದಾದ್ಯಂತ ದಾಳಿ ನಡೆಸಿರುವ ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಿಗೆ ವಿವಿಧ ಇಲಾಖೆಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮನೆಯಲ್ಲಿಯೇ ಇದ್ದು ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಸಾರ್ವಜನಿಕರಿಗಾಗಿ ಬಿಜೆಪಿ ಕಾರ್ಯಕರ್ತರಿಂದ ಆಯೋಜನೆ ಮಾಡಲಾಗಿರುವ ಈ ಊಟದ ವ್ಯವಸ್ಥೆ ಪ್ರಾಯೋಗಿಕವಾಗಿದ್ದು, ಸಾರ್ವಜನಿಕರಿಂದ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಪ್ಯಾಕೇಟ್ ಮೂಲಕ ಇಲ್ಲವೇ ಕಿಟ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ ಕೊರೊನಾ ಜಾಗೃತಿ ಸಲುವಾಗಿ ಜಿಲ್ಲಾಧಿಕಾರಿಗಳಿಗೆ ನನ್ನ ಅನುದಾನದಿಂದ 5.5 ಲಕ್ಷ ರೂ.ಗಳನ್ನು ನೀಡಿದ್ದೇನೆ. ಮುಂದೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು.
ಪಡಿತರ ಚೀಟಿ ಇಲ್ಲದ ಪರ ಊರಿನವರಿಗೆ ದಿನಸಿ ಇತರೆ ಮತ್ತು ಊಟ, ಉಪಹಾರದ ವ್ಯವಸ್ಥೆಯನ್ನು ತಾಲೂಕ ಆಡಳಿತದಿಂದ ನಿರ್ವಹಿಸಲಾಗುತ್ತಿದೆ. ಆದರೆ ಪಡಿತರ ಚೀಟಿ ಇಲ್ಲದ ಸ್ಥಳೀಯರಿಗೆ ಯಾವುದೇ ಯೋಜನೆ ಸರ್ಕಾರದಿಂದ ಇಲ್ಲ. ದ್ವಿಚಕ್ರ ವಾಹನ ಹೊಂದಿರುವ ಕೆಲವರಿಗೆ ಬಿಪಿಎಲ್ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು.