ದಾವಣಗೆರೆ: ನಗರದ ಕುಂದವಾಡ ಕೆರೆ ಬಳಿ ಇರುವ ಗ್ಲಾಸ್ ಹೌಸ್ನಲ್ಲಿ ಪುಷ್ಪಲೋಕವೇ ಅರಳಿ ನಿಂತಿದೆ. ಗಾಜಿನ ಮನೆಯಲ್ಲಿ ಫಲಪುಷ್ಪ ವೈಭವ ಆರಂಭವಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಜನರ ಮನಸೂರೆಗೊಳ್ಳಲಿದೆ.
ಪ್ರತಿವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆಯು ಗಾಜಿನ ಮನೆಯಲ್ಲಿ ನಡೆಸುವ ಫಲಪುಷ್ಪ ಪ್ರದರ್ಶನ ಮತ್ತು ಸಸ್ಯ ಸಂತೆಗೆ ಚಾಲನೆ ಸಿಕ್ಕಿದೆ. ಇಲ್ಲಿ ಹೂವುಗಳು, ಪ್ರವಾಸಿಗರು ಮತ್ತು ಸ್ಥಳೀಯರನ್ನು ಕೈ ಬೀಸಿ ಕರೆಯುತ್ತಿವೆ.
ವಿಶೇಷತೆಗಳು:
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಹಲವು ವಿಶೇಷತೆಗಳಿವೆ. ಗುಲಾಬಿ ಹೂವುಗಳಿಂದ ರೂಪಿಸಲಾಗಿರುವ ಪ್ಯಾರಿಸ್ನ ಐಫೆಲ್ ಟವರ್ ಮಾದರಿ, ಗುಲಾಬಿ, ಸೇವಂತಿಗೆಯಿಂದ ತಯಾರಿಸಿರುವ ಅಣಬೆ, ಡಾಲ್ಫಿನ್, ಫೋಟೊ ಫ್ರೇಮ್, ಮಿಕ್ಕಿ ಮೌಸ್, ಸೈಕಲ್ ಆಕೃತಿ, ಸೇವಂತಿಗೆ ಹೂವುಗಳಿಂದ ಅಲಂಕಾರಗೊಳಿಸಲಾಗಿರುವ ಹಾರ್ಟ್ ಆಕಾರದ ಕಲಾಕೃತಿ ಹಾಗೂ ಗಾಜಿನ ಮನೆಯ ಗಿಡಗಳಿಗೆ ಮಾಡಿರುವ ಬಣ್ಣಬಣ್ಣದ ದೀಪಾಲಂಕಾರ ಗಮನ ಸೆಳೆಯುತ್ತಿದೆ.
ಇನ್ನು ಸಿರಿಧಾನ್ಯಗಳಿಂದ ತಯಾರಿಸಿದ ಬುದ್ಧ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಡಾ. ಎಂ. ಹೆಚ್. ಮರಿಗೌಡ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಬೆಂಗಳೂರಿನ ಎಸ್ ಪಿ ಅಗರವಾಲ್ ಅವರ ಸೆನಲು ಫ್ಲವರ್ಸ್ ಕಂಪನಿಯ 32 ನೌಕರರು, ಹಗಲಿರುಳು ಶ್ರಮಿಸಿ ಹೂವಿನ ಕಲಾಕೃತಿಗಳನ್ನು ರೂಪಿಸಿದ್ದಾರೆ. ಇನ್ನು ತರಕಾರಿಯಲ್ಲಿ ತಯಾರಿಸಲಾಗಿರುವ ವ್ಯಕ್ತಿ ಕಲಾಕೃತಿಗಳು ಎಲ್ಲರನ್ನು ನಿಬ್ಬೆರಗಾಗಿಸುತ್ತಿವೆ.
ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಪ್ರದರ್ಶನಕ್ಕೆ ಪ್ರವೇಶ ಇದ್ದು, ಬೆಂಗಳೂರಿನ ಲಾಲ್ಬಾಗ್ ಮಾದರಿಯಲ್ಲಿಯೇ ಈ ವರ್ಷದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸುವ ನಿರ್ಧಾರಕ್ಕೆ ತೋಟಗಾರಿಕೆ ಇಲಾಖೆ ಬಂದಿದೆ. ಶುಕ್ರವಾದಿಂದ ಒಟ್ಟು ಐದು ದಿನಗಳ ಕಾಲ ಪ್ರದರ್ಶನ ಇದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ. ಅಲ್ಲದೇ ಇಲ್ಲಿಗೆ ಬರುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರಕ್ಕೆ ಆ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ತೋಟಗಾರಿಕೆ ಮಾಡಿದೆ.