ದಾವಣಗೆರೆ: ಶಿಷ್ಯ ವೇತನಕ್ಕೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಯಾವ ಸಂಧಾನಕ್ಕೂ ಮಣಿಯುವ ಲಕ್ಷಣ ಗೋಚರಿಸುತ್ತಿಲ್ಲ. ಜನಪ್ರತಿನಿಧಿಗಳು, ಡಿಸಿ, ಎಸ್ಪಿ ಸೇರಿದಂತೆ ಹಲವರು ಸ್ಥಳಕ್ಕೆ ಬಂದು ಎಷ್ಟೇ ಮನವಿ ಮಾಡಿದರೂ, ಆಶ್ವಾಸನೆ ನೀಡಿದರೂ ಜಗ್ಗುತ್ತಿಲ್ಲ. ಸಂಧಾನವೂ ವಿಫಲವಾಯ್ತು. ಲಿಖಿತ ಭರವಸೆ ಸಿಗುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.
ಹೋರಾಟ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ಎಂಎಲ್ಸಿ ನಾರಾಯಣಸ್ವಾಮಿ, ಡಿಸಿ, ಎಸ್ಪಿ ಸೇರಿದಂತೆ ಅಧಿಕಾರಿಗಳು ಜಯದೇವ ವೃತ್ತಕ್ಕೆ ಸಂಜೆ ಆಗಮಿಸಿದರು. ಈ ವೇಳೆ ಸಿದ್ದೇಶ್ವರ್, ನಾರಾಯಣಸ್ವಾಮಿ ನಮಗೆ ಒಂದು ವಾರ ಕಾಲಾವಕಾಶ ನೀಡಿ. ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ಜೆಜೆಎಂ ಕಾಲೇಜಿನ ಆಡಳಿತ ಮಂಡಳಿ ಅಥವಾ ಸರ್ಕಾರದಿಂದಲೇ ಶಿಷ್ಯ ವೇತನ ಕೊಡಿಸುತ್ತೇವೆ. ದಯವಿಟ್ಟು ಮುಷ್ಕರ ಬಿಡಿ ಎಂದು ಕೈಮುಗಿದು ಮನವಿ ಮಾಡಿದರು.
ಈಗಾಗಲೇ ಸಿಎಂ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಜೊತೆ ಮಾತನಾಡಿದ್ದೇನೆ. ನೀವೆಲ್ಲ ನಮ್ಮ ಮಕ್ಕಳಿದ್ದಂತೆ. ನಿಮ್ಮ ಕಷ್ಟ ಅರ್ಥವಾಗುತ್ತದೆ. ನನ್ನ ಮೇಲೆ ನಂಬಿಕೆ ಇಡಿ. ಒಂದು ವಾರದೊಳಗೆ ಸ್ಟೈಫಂಡ್ ಬರದಿದ್ದರೆ ನಾವೂ ನಿಮ್ಮ ಜೊತೆ ಬಂದು ಧರಣಿ ಕೂರುತ್ತೇವೆ. ಸರ್ಕಾರದ ಪರವಾಗಿ ನಾವೇ ಇಲ್ಲಿಗೆ ಬಂದಿದ್ದೇವೆ. ಕಾಲಾವಕಾಶ ನೀಡದಿದ್ದರೆ ಏನು ಮಾಡಲು ಆಗಲ್ಲ. ಬೇಡಿಕೆ ಈಡೇರದಿದ್ದರೆ ಮಷ್ಕರ ಮುಂದುವರಿಸಿ. ಇಲ್ಲಿಗೆ ಹೋರಾಟ ನಿಲ್ಲಿಸಿ ಎಂದು ಸಿದ್ದೇಶ್ವರ್ ಹಾಗೂ ನಾರಾಯಣಸ್ವಾಮಿ ಮನವಿ ಮಾಡಿ ಜ್ಯೂಸ್ ಬಾಟಲ್ ನೀಡಿದರು.
ಹತ್ತು ನಿಮಿಷ ಎಲ್ಲರೂ ಚರ್ಚಿಸಿ. ಬಳಿಕ ನಿಮ್ಮ ನಿರ್ಧಾರ ಹೇಳಿ ಎಂದು ಸಿದ್ದೇಶ್ವರ್ ಹೇಳಿ ಹೊರಟರು. ನಾರಾಯಣ ಸ್ವಾಮಿ, ಡಿಸಿ ಮಹಾಂತೇಶ್ ಆರ್.ಬೀಳಗಿ, ಎಸ್ಪಿ ಹನುಮಂತರಾಯ ಅವರೂ ಮನವಿ ಮಾಡಿ ತೆರಳಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯ ಹರೀಶ್, ನಮಗೆ ಭರವಸೆ ಕೇಳಿ ಕೇಳಿ ಸಾಕಾಗಿದೆ. 16 ತಿಂಗಳಿನಿಂದ ಶಿಷ್ಯವೇತನ ಬಾರದ ಕಾರಣ ನಮ್ಮ ಪರಿಸ್ಥಿತಿ ಹೇಳತೀರದಾಗಿದೆ. ಲಿಖಿತ ಭರವಸೆ ನೀಡದ ಹೊರತು ಮುಷ್ಕರ ನಿಲ್ಲದು. ಸಿಎಂ ಯಡಿಯೂರಪ್ಪ ಅವರೇ ನೀಡುವಂತೆ ಹೇಳಿದ್ದರೂ ಕೆಲಸ ಆಗಿಲ್ಲ. ಈಗ ಇವರ ನಂಬುವುದಾದರೂ ಹೇಗೆ. ಹಾಗಾಗಿ ಮುಷ್ಕರ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.