ದಾವಣಗೆರೆ: ಜಗಜ್ಯೋತಿ ಬಸವಣ್ಣನವರ ಇತಿಹಾಸವನ್ನು ತಿರುಚುವ ಮೂಲಕ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರನ್ನು ಕೂಡಲೇ ಸಮಿತಿಯಿಂದ ವಜಾಗೊಳಿಸಿ ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಯಾತ್ರಿ ನಿವಾಸದಲ್ಲಿ ಮಾತನಾಡಿದ ಅವರು, ಉತ್ತಮ ವಿಚಾರವಂತರನ್ನು ಸಮಿತಿಗೆ ನೇಮಕ ಮಾಡಬೇಕಾಗಿತ್ತು. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವ ತತ್ವಕ್ಕೆ ಅಪಚಾರ ಮಾಡಿರುವಂತೆ ಮುದ್ರಿಸಿರುವುದು ಖಂಡನೀಯ. ವಿಶ್ವಗುರು ಬಸವಣ್ಣ ಅವರ ವಾಸ್ತವ ವಿಷಯಗಳನ್ನು ಅರಿತು ಪಠ್ಯಪುಸ್ತಕದಲ್ಲಿ ಮುದ್ರಿಸಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸರ್ಕಾರದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಶ್ರೀ: ಬಸವಣ್ಣನವರು ಇಷ್ಟಲಿಂಗದ ಜನಕರಾಗಿದ್ದಾರೆ. ಈ ಸತ್ಯವನ್ನು ಅರಿಯದೇ ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಸಮಿತಿಯವರು ಮನಬಂದಂತೆ ಮುದ್ರಿಸಿದ್ದಾರೆ. ಕೂಡಲೇ ಬಸವಣ್ಣನವರ ನೈಜ ಅಂಶಗಳನ್ನು ಅರಿಯಬೇಕಿದೆ. ಕೋಮು ದ್ವೇಷ, ಭಾವನೆಗಳಿಗೆ ಧಕ್ಕೆಯಾಗದೇ, ಚಳವಳಿಯ ರೂಪ ಪಡೆಯಲು ಅವಕಾಶ ನೀಡದೇ ಬಸವಣ್ಣನವರಿಗೆ ಎಸಗಿರುವ ಅಪಚಾರವನ್ನು ಸರಿಪಡಿಸಿ, ಮರು ಮುದ್ರಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಸವಣ್ಣನವರ ವಚನಗಳನ್ನು ತಿದ್ದುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ: ಸಿದ್ದಗಂಗಾ ಶ್ರೀ