ದಾವಣಗೆರೆ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಲು ಮುನ್ನೆಚ್ಚರಿಕಾ ಕ್ರಮವಾಗಿ ರೌಡಿಶೀಟರ್‌ಗಳಿಗೆ ದಾವಣಗೆರೆ ಎಸ್ಪಿ ಆರ್.ಚೇತನ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಜಿಲ್ಲೆಯಲ್ಲಿ 1735 ರೌಡಿಶೀಟರ್:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಭದ್ರತಾ ಕ್ರಮದ ಕುರಿತು ಮಾಹಿತಿ ನೀಡಿದ ದಾವಣಗೆರೆ ಎಸ್ಪಿ ಆರ್.ಚೇತನ್, ಜಿಲ್ಲೆಯಲ್ಲಿ 1735 ರೌಡಿಶೀಟರ್ಗಳು ಇದ್ದಾರೆ. ಈಗಾಗಲೇ 1008 ಪ್ರಕರಣ ದಾಖಲಿಸಿಕೊಂಡು ತಾಲೂಕು ದಂಡಾಧಿಕಾರಿಗಳ ಎದುರು ರೌಡಿಶೀಟರ್‌ಗಳನ್ನು ಹಾಜರುಪಡಿಸಲಾಗುತ್ತಿದೆ. ಪೊಲೀಸ್ ಠಾಣೆಗೂ ಕರೆಸಿ ಚುನಾವಣೆ ವೇಳೆ ಗಲಾಟೆ ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
140 ಕ್ರಿಮಿನಲ್ ಗುಂಡಾಗಳು
ಜಿಲ್ಲೆಯಲ್ಲಿ ಕೋಮುಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿರುವ 140 ಗೂಂಡಾಗಳಿದ್ದು, ಅವರ ಮೇಲೆಯೂ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಜೊತೆಗೆ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ.
ಒಟ್ಟು 760 ಆಯುಧಗಳು
ನಾಗರಿಕರ ಬಳಿ ಪರವಾನಗಿ ಪಡೆದ 760 ಆಯುಧಗಳಿದ್ದು, ಸಂಬಂಧಪಟ್ಟ ಠಾಣೆಗೆ ನೀಡಲು ಸೂಚಿಸಲಾಗಿದೆ. ಇನ್ನು ಬ್ಯಾಂಕ್ ಸೇರಿದಂತೆ ಇನ್ನಿತರೆ ಅವಶ್ಯವಿರುವ ಸ್ಥಳಗಳಲ್ಲಿ ಬೇಕು ಎಂದು ಕೇಳಿದರೆ ಸ್ಕ್ರೀನಿಂಗ್ ಕಮಿಟಿ ತೆರೆಯಲಾಗಿದ್ದು, ವಿವರ ಪಡೆದು ಶಸ್ತ್ರಾಸ್ತ್ರ ನೀಡಲಾಗುವುದು ಎಂದು ತಿಳಿಸಿದರು.
43 ಚೆಕ್ ಪೋಸ್ಟ್, 25 ಸ್ಕ್ವಾಡ್
ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 43 ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗುವುದು. 25 ಫ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದೆ. ಚುನಾವಣೆ ಅಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ದೂರು ನೀಡಲು ಆಯೋಗವು ಮೊಬೈಲ್ ಆ್ಯಪ್ ಹೊರ ತಂದಿದೆ. ನಾಗರಿಕರು ಇದರ ಮೂಲಕ ದೂರು ನೀಡಿದರೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಟ್ಟಾರೆ ಏಪ್ರಿಲ್ 23ರಂದು ದಾವಣಗೆರೆ ಲೋಕಸಭೆ ಚುನಾವಣಾ ನಡೆಯಲಿದ್ದು, ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.