ದಾವಣಗೆರೆ: ಕೊರೊನಾ ಬಂದ ಬಳಿಕ ಏರಿಯಾದಲ್ಲಿ ಸೀಲ್ ಡೌನ್ ಮಾಡುವ ವಿಚಾರಕ್ಕೂ ಈಗ ರಾಜಕೀಯ ಎಂಟ್ರಿಯಾಗಿದೆ. ಸೀಲ್ ಡೌನ್ ಮಾಡುವ ಸಂಬಂಧ ಮಹಾನಗರ ಪಾಲಿಕೆಯ ಮೇಯರ್ ಅಧಿಕಾರಿಯ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ದಾವಣಗೆರೆಯ ಹಳೆ ಕಾಳಿಕಾದೇವಿ ರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪ ಮಳಿಗೆ ಎದುರುಗಡೆಯ ಒಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎದುರುಗಡೆ ಇದ್ದ ಅಂಗಡಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಮೇಯರ್ ಅಜಯ್ ಕುಮಾರ್ ಮಾತನಾಡಿರುವ ಆಡಿಯೋ ಈಗ ವೈರಲ್ ಆಗಿದೆ.
ಮೇಯರ್ ಮಾತನಾಡಿದ ಬಳಿಕ ಬೆಳಗಾಗುವುದರೊಳಗೆ ಸೀಲ್ ಡೌನ್ ತೆರವು ಮಾಡಲಾಗಿದೆ. ಕಮರ್ಷಿಯಲ್ ಅಂಗಡಿಗಳಿಗೆ ತೊಂದರೆಯಾಗಬಾರದು. ಮಾತ್ರವಲ್ಲ, ಬಿ.ಎಸ್. ಚನ್ನಬಸಪ್ಪನವರ ಮಳಿಗೆಯ ವ್ಯಾಪಾರಕ್ಕೂ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವ ಆಡಿಯೋ ಈಗ ಬೆಳಕಿಗೆ ಬಂದಿದೆ.
ಆದ್ರೆ, ಈ ಪ್ರದೇಶದ ಜನರು ಮಾತ್ರ ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯಬಾರದು. ಜನರ ಆರೋಗ್ಯ ಮುಖ್ಯ. ಎಷ್ಟೇ ದೊಡ್ಡವರಾದರೂ ಕಾನೂನು ಒಂದೇ. ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರುವುದಕ್ಕೆ ನಮ್ಮ ವಿರೋಧ ಇದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.