ದಾವಣಗೆರೆ : ಸತತ 17 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತರಾಗಿ ತಾಯ್ನಾಡಿಗೆ ಮರಳಿದ ದಾವಣಗೆರೆ ಜಿಲ್ಲೆಯ ಇಬ್ಬರು ಯೋಧರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಬೆಳಗಾವಿಯಿಂದ ರೈಲು ಮೂಲಕ ದಾವಣಗೆರೆಗೆ ಆಗಮಿಸಿದ ಪರಮೇಶ್ ಮತ್ತು ಪುಟ್ಟಸ್ವಾಮಿ ಎಂಬಿಬ್ಬರು ಯೋಧರನ್ನು ಮೇಯರ್ ಜಯಮ್ಮ ಗೋಪಿನಾಯ್ಕ್ ಹಾಗೂ ಕೆಲ ಪಾಲಿಕೆ ಸದಸ್ಯರು ಹೂಗುಚ್ಛ ನೀಡಿ ಸನ್ಮಾನ ಮಾಡುವ ಮೂಲಕ ದಾವಣಗೆರೆಗೆ ಬರಮಾಡಿಕೊಂಡರು.
ಜನಸಾಮಾನ್ಯರು ಕೂಡ ಅದ್ಧೂರಿಯಾಗಿ ಸ್ವಾಗತ ಕೋರಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ದಾವಣಗೆರೆ ಜಿಲ್ಲೆಯ ಪಾವಗಡ ಗ್ರಾಮದ ಪುಟ್ಟಸ್ವಾಮಿ ಹಾಗೂ ಸರಸ್ವತಿ ನಗರದ ನಿವಾಸಿಯಾದ ಪರಮೇಶ್ ಇಬ್ಬರನ್ನು ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಬರಮಾಡಿಕೊಂಡು ಸನ್ಮಾನ ಮಾಡಿದರು. ಬಳಿಕ ಇಬ್ಬರು ಯೋಧರು ಕೂಡ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಯವರ ಪುತ್ಥಳಿಗೆ ನಮಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿವೃತ್ತ ಯೋಧ ಪುಟ್ಟಸ್ವಾಮಿ ಅವರು, ನಮ್ಮ ಭಾರತಕ್ಕೆ ಮತ್ತಷ್ಟು ಯೋಧರ ಬಲ ಬೇಕಾಗಿದೆ, ಇಲ್ಲವಾದಲ್ಲಿ ಉಕ್ರೇನ್ಗೆ ಆದ ಸ್ಥಿತಿ ನಮ್ಮ ಭಾರತಕ್ಕೆ ಬರುವುದರಲ್ಲಿ ಸಂದೇಹವಿಲ್ಲ. ಹೆಚ್ಚು ಯುವಕರು ಉತ್ಸಾಹದಿಂದ ಸೇನೆಯನ್ನು ಸೇರುವ ಮೂಲಕ ಮಿಲಿಟರಿ ಪಡೆಯನ್ನು ಬಲಪಡಿಸಬೇಕಾಗಿದೆ ಎಂದರು.
ನಿವೃತ್ತ ಯೋಧ ಪರಮೇಶ್ ಮಾತನಾಡಿ, ರಾಜಸ್ಥಾನ, ದೆಹಲಿ, ಅಹ್ಮದ್‌ನಗರ ಹಾಗೂ ಮಹಾರಾಷ್ಟ್ರವೂ ಸೇರಿದಂತೆ ಮುಂತಾದ ಕಡೆ ಕೆಲಸ ಮಾಡಿದ್ದೇವೆ, ನಮ್ಮ ಭಾಗದವರು ಸೇನೆ ಸೇರುವುದು ಕಡಿಮೆ, ನಮ್ಮ ದಾವಣಗೆರೆಯವರು ಹೆಚ್ಚು ಸೇನೆ ಸೇರಲು ಮನಸ್ಸು ಮಾಡಬೇಕು ಎಂದರು.
ಇದನ್ನೂ ಓದಿ: ಕಲಬುರಗಿ ಪಿಎಸ್‌ಐ ವೀರಭದ್ರ ಎಸ್.ಹೆಚ್ ಅವರಿಗೆ ಮುಖ್ಯಮಂತ್ರಿ ಪದಕ