ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬೆಣ್ಣೆನಗರಿಗೆ 15 ನೇ ರ್‍ಯಾಂಕ್ ಸಿಕ್ಕಿದೆ. ಇನ್ನೊಂದೆಡೆ, ಸ್ಮಾರ್ಟ್ಸಿಟಿಯಾಗಿ ವರ್ಷಗಳೇ ಉರುಳಿದರೂ ಕೂಡ ಕಾಮಗಾರಿ ಮಾತ್ರ ಮಂದಗತಿಯಲ್ಲಿಯೇ ನಡೆಯುತ್ತಿದೆ.
ಈ ಯೋಜನೆಯಡಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಆಮೆವೇಗದಲ್ಲಿ ಸಾಗುವ ಕಾಮಗಾರಿಯಿಂದ ಜನಸಾಮಾನ್ಯರಿಗೆ ವ್ಯಾಪಾರ, ವಹಿವಾಟು ನಡೆಸಲು ತೊಂದರೆಯಾಗುತ್ತಿದೆ. ಸಂಸದರು, ಸಚಿವರು ವರ್ಷಕ್ಕೆರಡು ಬಾರಿ ತರಾತುರಿಯಲ್ಲಿ ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವಂತೆ ನಾಟಕವಾಡಿ ಹೋಗ್ತಾರೆ ಎನ್ನುವ ಮಾತು ಸಾರ್ವಜನಿಕರದ್ದು.
ಈ ನಡುವೆ ದಾವಣಗೆರೆ ಸ್ಮಾರ್ಟ್ ಸಿಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದಿದೆ. ರೂನಾಲ್ಡ್ ಬರ್ಗರ್ ಎಂಬ ಸಂಸ್ಥೆ ಪ್ರಪಂಚದ ಆಯ್ದ ನಗರಗಳನ್ನು ಸರ್ವೇ ಮಾಡಿ, ಕೆಲ ಮಾನದಂಡಗಳ ಮೂಲಕ ಸ್ಮಾರ್ಟ್ ಸಿಟಿಗಳಿಗೆ ರ್‍ಯಾಂಕಿಂಗ್ ನೀಡುತ್ತಿದೆ. ಈ ರ್ಯಾಂಕಿಂಗ್‌ನಲ್ಲಿ ದಾವಣಗೆರೆ 15 ನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲನೇ ಸ್ಥಾನ ವಿಯಟ್ನಾಂ, ಎರಡನೇ ಸ್ಥಾನ ಲಂಡನ್ ಪಡೆದರೆ ಭಾರತದಲ್ಲಿ ದಾವಣಗೆರೆ ಮಾತ್ರ 15 ನೇ ಸ್ಥಾನ ಪಡೆದಿದೆ. ಡಿಪಿಆರ್, ಸಿಗ್ನಲ್, ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಹಲವು ಮಾನದಂಡಗಳಿಂದ ದಾವಣಗೆರೆ ಈ ಸ್ಥಾನ ಪಡೆದುಕೊಂಡಿದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ನೋಡುವುದಾದರೆ ಮಂದಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿಗೆ ಈ ರೀತಿ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ ಎಂದರೆ, ಬೇರೆ ಕಡೆ ಕಾಮಗಾರಿ ಇನ್ನೆಷ್ಟು ವಿಳಂಬವಾಗಿರಬಹುದು ಅನ್ನೋದು ಜನ ಸಾಮಾನ್ಯರ ಪ್ರಶ್ನೆ.