ದಾವಣಗೆರೆ: ತಾಲೂಕಿನ ಶಿರಗನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರೋರಾತ್ರಿ ಕಿಡಿಗೇಡಿಗಳು ಎರಡು ಎಕರೆ ಅಡಿಕೆ ತೋಟದಲ್ಲಿ ಸುಮಾರು 50ಕ್ಕೂ ಹೆಚ್ಚುಅಡಿಕೆ ಗಿಡಗಳನ್ನು ಕಡಿದು ಹಾಕಿರುವ ಘಟನೆ ನಡೆದಿದೆ.
ಬರಗಾಲದಲ್ಲಿ ಎಲ್ಲೆಡೆ ನೀರಿನ ಸಮಸ್ಯೆ ಇದ್ದು, ತೋಟ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದಾವಣಗೆರೆ ತಾಲೂಕಿನ ಶಿರಗನಹಳ್ಳಿ ರೈತರಾದ ರವಿಕುಮಾರ್, ಪರುಶುರಾಮ್ ಕಷ್ಟಪಟ್ಟು ಮೂರು ವರ್ಷಗಳಿಂದ ಎರಡು ಎಕರೆ ಅಡಿಕೆ ಬೆಳೆಸಿದ್ದರು. ದೇವರ ಬೆಳಕೆರೆ ಪಿಕಪ್ಗೆ ಕೆರೆ ಶಿರಗನಹಳ್ಳಿಗೆ ಕೂಡಿಕೊಂಡಿದ್ದು, ಕೆರೆ ಬತ್ತಿದಾಗ ಹಲವಾರು ಬಾರಿ ಸಾಕಷ್ಟು ನೀರಿನ ಸಮಸ್ಯೆ ಎದುರಿಸಿದ್ದರೂ ಕಷ್ಟಪಟ್ಟು ಅಡಿಕೆ ತೋಟ ಮಾಡಿದ್ದರು. ಆದರೆ, ಕಿಡಿಗೇಡಿಗಳು ಹಳೇ ದ್ವೇಷದ ಹಿನ್ನೆಲೆ ಸುಮಾರು 50ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ದುಷ್ಕೃತ್ಯ ಎಸಗಿದ್ದಾರೆ.
ಈ ಕೃತ್ಯಕ್ಕೆ ಕಟ್ಟಿಂಗ್ ಮಶಿನ್ ಬಳಕೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಬರಗಾಲದಲ್ಲೂ ನಾವೂ ಕಷ್ಟಪಟ್ಟು ಅಡಿಕೆ ಸಲುಹಿದ್ದೇವು ಆದರೆ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ ಎಂದು ರೈತ ರವಿಕುಮಾರ್ ಅಳಲು ತೋಡಿಕೊಂಡಿದ್ದಾರೆ. ಕಷ್ಟಪಟ್ಟು ಮಕ್ಕಳಂತೆ ಸುಮಾರು ಮೂರು ವರ್ಷಗಳಿಂದ ಅಡಿಕೆ ತೋಟವನ್ನು ಜೋಪಾನ ಮಾಡಿದ್ದೇವೆ. ಇಂತಹ ಕೃತ್ಯ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ರವಿಕುಮಾರ್ ಒತ್ತಾಯಪಡಿಸಿದ್ದಾರೆ. ಈ ಸಂಬಂಧ ಹದಡಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.