ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಹಾಗೂ ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಭೆ ನಡೆಸಿದರು.
ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುವ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೊರೊನಾ ವೈರಸ್ ಭೀಕರತೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಎಸ್.ಈಶ್ವರಪ್ಪ ದಾವಣಗೆಗೆ ಭೇಟಿ ನೀಡಿಲ್ಲ ಎಂಬ ಟೀಕೆ ಕೇಳಿಬಂದಿತ್ತು. ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ದೃಢಪಟ್ಟಿತ್ತು. ಕೊರೊನಾ ಭೀತಿಯೂ ಇತ್ತು. ಈ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಎಸ್.ಎಸ್. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರಸಾದ್, ನಮ್ಮಲ್ಲಿ ಪ್ರಯೋಗಾಲಯ ಇದೆ. ಆದರೆ, ಮೆಡಿಕಲ್ ಕಿಟ್ ವ್ಯವಸ್ಥೆ ಇಲ್ಲ. ರಕ್ತದ ಮಾದರಿ ಬೇರೆ ಜಿಲ್ಲೆಗಳಿಗೆ ಕಳುಹಿಸುವ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದಷ್ಟು ಬೇಗ ಇದನ್ನು ಒದಗಿಸುವ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಬೆಂಗಳೂರಿಗೆ ಅಧಿಕಾರಿಯೊಬ್ಬರನ್ನು ಕಳುಹಿಸಿ. ಈ ಕೆಲಸ ಮುಗಿಸಿದ ಬಳಿಕವೇ ವಾಪಸ್ ಬರಲಿ. ಮಾತ್ರವಲ್ಲ ಕೊರೊನಾ ಹಾಗೂ ಹಕ್ಕಿಜ್ವರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದು ಹೇಳಿದರು.