ದಾವಣಗೆರೆ: ಕೊರೊನಾ ವಾರಿಯರ್ಸ್ಗೆ ಜಿಲ್ಲಾಡಳಿತ ವತಿಯಿಂದ ಹೂ ಮಳೆ ಸುರಿಯುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ‘ಕೊರೊನಾ ಇದು ಸರಿನಾ’ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶ್ರೀಹರ ಮ್ಯೂಸಿಕಲ್ ವರ್ಲ್ಡ್, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯಲ್ಲಿ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಂಭಾಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕದಳದ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್ರನ್ನು ಸನ್ಮಾನಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಸ್.ಷಡಕ್ಷರಿ ಮಾತನಾಡಿ, ಉತ್ತರ ಕರ್ನಾಟಕದ ಪ್ರವಾಹದಲ್ಲಿ ನೆರೆ ಸಂತ್ರಸ್ತರ ನೆರವಿಗೆ ಹಾಗೂ ಲಾಕ್‍ಡೌನ್ ಸಮಯದಲ್ಲಿ ತಮ್ಮ ಒಂದು ದಿನದ ವೇತನ ಒಟ್ಟು ₹200 ಕೋಟಿ ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರು ನೀಡಿದ್ದಾರೆ. ಕೋವಿಡ್-19 ಸಂಬಂಧ ನೌಕರರಿಗೆ ಭಯ ಬೇಡ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ಸರ್ಕಾರಿ ನೌಕರರ ವೇತನ ಮತ್ತು ಡಿಎ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಮಟ್ಟದಲ್ಲಿ ಪಿಡಿಒ ಮತ್ತು ಕಾರ್ಯದರ್ಶಿಗಳು ಸೇರಿದಂತೆ ಹಲವು ಇಲಾಖೆಗಳ ಸರ್ಕಾರಿ ನೌಕರರು ಕೊರೊನಾ ಕುರಿತು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ದೆಹಲಿ, ತಮಿಳುನಾಡು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸರ್ಕಾರಿ ನೌಕರರು ಹೆಚ್ಚು ವೇತನವನ್ನು ಸರ್ಕಾರಕ್ಕೆ ನೀಡಿದ್ದಾರೆ ಎಂದು ಪ್ರಶಂಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೋವಿಡ್ ಸೋಂಕಿತರು ಇನ್ನೂ ಹೆಚ್ಚಾದರೂ ಸರ್ಕಾರಿ ನೌಕರರು ಎಂದೆಂದಿಗೂ ನಮ್ಮ ಜೊತೆ ಇರುತ್ತಾರೆ ಎಂಬ ಭರವಸೆಯಿದೆ ಎಂದರು.