ದಾವಣಗೆರೆ: ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಮುಂದಿನ ಸಿಎಂ ಮುರುಗೇಶ್ ನಿರಾಣಿ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಟಾಂಗ್ ನೀಡಿದರು.
ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಮಾತನಾಡಿದ ಅವರು ಈಶ್ವರಪ್ಪ ಹಿರಿಯ ಸಚಿವರು. ಇಂತಹ ಅಸಂಬದ್ಧ ಹೇಳಿಕೆಗಳನ್ನು ಕೊಡಬಾರದು. ವಿನಾಕಾರಣ ಇಂತಹ ಹೇಳಿಕೆಗಳನ್ನು ಕೊಟ್ಟು ಪಕ್ಷದಲ್ಲಿ ಗೊಂದಲ ಮೂಡಿಸಬಾರದು ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ಬಿಜೆಪಿ ವಿರುದ್ಧದ ಮೈತ್ರಿ ಸಾಧ್ಯವಿಲ್ಲ: ದಿಗ್ವಿಜಯ್ ಸಿಂಗ್
ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. 2023ರ ಚುನಾವಣೆಯ ನಂತರ ಹೈಕಮಾಂಡ್ ಯಾರನ್ನು ಸಿಎಂ ಆಗಿ ಸೂಚಿಸುತ್ತದೆಯೋ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಬೇಡ ಎಂದು ಹೇಳಿದರು.
ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ವಿಚಾರ
ಶಾಸಕ ವಿಶ್ವನಾಥ್ ಅವರನ್ನು ಹತ್ಯೆ ಮಾಡಲು ಸ್ಕೆಚ್ ರೂಪಿಸಿದ್ದಾರೆ ಎಂಬುದು ಖಂಡನೀಯ. ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳು ಒಳಿತಲ್ಲ. ವಿಶ್ವನಾಥ್ ಅವರು ಘಟನೆ ಕುರಿತು ಈಗಾಗಲೇ ಸಿಎಂ, ಗೃಹ ಸಚಿವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.